ಮಂಗಳವಾರ, ಅಕ್ಟೋಬರ್ 17, 2017

ನಗುವಿನ ಕಂತೆ



ಸುಳಿದಾಡದು ಎನ್ನೊಳು ಚಿಂತೆ, ಸನಿಹದಲಿ ನೀನಿರಲು ನನಸಿನಂತೆ
ತೆರೆದರೆ ನಿನ್ನ ತೊದಲು ನುಡಿಗಳ ಸಂತೆ, ನಾ ಕೊಳ್ಳುವೆ ನಗುವಿನ ಕಂತೆ||

ಶುಕ್ರವಾರ, ಜುಲೈ 21, 2017

ಸೆರೆ



ನೀ ನನ್ನ ಮರೆತರೆ,
ನಾ ಕೊಡುವೆ ನೆನಪುಗಳ ಉಡುಗೊರೆ||
ನೀನಾಗ ನನ್ನ ನೆನೆದರೆ,
ಆ ಕ್ಷಣವೇ ನಾನಾಗುವೆ ನಿನ್ನ ಸೆರೆ||

ಗುರುವಾರ, ಜುಲೈ 13, 2017

ಮುಗ್ಧತೆ



ನಿನ್ನ ಮುಗ್ಧತೆಯಿಂದ  ನಗುವನ್ನು ನಾ ಕೊಂಡುಕೊಂಡೆನು
ಆ ನಗುವಿನಿಂದ ಮತ್ತೆ ನನ್ನ ಬದುಕನ್ನು ಕಂಡುಕೊಂಡೆನು
ಹೊಸ ಬದುಕಿಗೆ ನಿನ್ನ ದೆಸೆಯಿಂದ ಪ್ರೀತಿಯ ತಂದುಕೊಂಡೆನು
ಆ ಪ್ರೀತಿಯು ನನ್ನ ಪಾಲಿನ ದೈವ ಎಂದುಕೊಂಡೆನು||

ಸೋಮವಾರ, ಜೂನ್ 05, 2017

ಸಾಧ್ಯವೆ?



ಜೀವನದ ಕೆಲ ಕ್ಷಣಗಳ ಸೋಲಿಸಿದರೂ, ಬದುಕನ್ನೇ ಸೋಲಿಸಲು ಸಾಧ್ಯವೆ?
ನಾವು ಸಾವನ್ನು ಗೆಲ್ಲಲಾಗದಿದ್ದರೂ ಅದರ ಭಯವನ್ನು ಗೆಲ್ಲಬಹುದಲ್ಲವೆ||

ಶುಕ್ರವಾರ, ಜೂನ್ 02, 2017

ಸೂತ್ರ



ಇಲ್ಲಿ ಏನೂ ನಿಲ್ಲದು, ಉಳಿಯುವುದು ಬರೀ ನೆನಪು ಮಾತ್ರ
ಈ ಕ್ಷಣ ನಿನ್ನದು, ನೆನ್ನೆ-ನಾಳೆಗಳು ಬರೀ ನೆಪ ಮಾತ್ರ||
ಎಲ್ಲವ ಸ್ವೀಕರಿಸಿ ಎಲ್ಲರೊಳಗೊಂದಾಗಿ ನಿರ್ವಹಿಸು ನಿನ್ನ ಪಾತ್ರ
ಇದುವೆ ನಿನ್ನ ಬದುಕಿಗೆ ಸುಖ ಶಾಂತಿಗಳ ತರುವ ಸೂತ್ರ||

ಮಂಗಳವಾರ, ಏಪ್ರಿಲ್ 25, 2017

ನೆನಪುಗಳ ಹಾದಿಯಲಿ



ಸಾಗಿಹುದು ಸಮಯ ಸವಿಕ್ಷಣಗಳ ಸೃಷ್ಠಿಸುತ್ತ,
ನಾನಿಲ್ಲೆ ನಿಂತಿರುವೆ ನೆನಪುಗಳ ನಿರೀಕ್ಷಿಸುತ್ತ||

ನೆನಪುಗಳು ಉಳಿಯಲಿ ಬದುಕಿನ ಹಾದಿಯಲಿ,
ಮನದಿ ಮಾಸದ ಮಂದಹಾಸವ ಮೂಡಿಸುತ್ತ||

ಬದುಕು ಸಾಗಲಿ ನೆನಪುಗಳ ಸೋಗಿನಲಿ,
ನಾಳೆಯ ನಿರೀಕ್ಷೆಗಳ ನೆಲೆಯಲ್ಲಿ ನನ್ನನು ನಿಲ್ಲಿಸುತ್ತ||

ಬುಧವಾರ, ಮಾರ್ಚ್ 29, 2017

ಯುಗಾದಿ 2017



ಬೆಲ್ಲದ ಸಿಹಿಯಲಿ ಕಹಿಯು ಕರಗಲಿ,
ಹಬ್ಬದ ಖುಷಿಯಲಿ ನೋವು ಸರಿಯಲಿ,
ಹೊಸ ವರ್ಷದಲಿ ಸುಖ ಸಂತಸಗಳು ನಿಮ್ಮದಾಗಲಿ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 

ಗುರುವಾರ, ಮಾರ್ಚ್ 23, 2017

ಕಂದಮ್ಮ



ನಿನ್ನ ಪುಟ್ಟ ಕಣ್ಗಳ ಕಾಂತಿಯಲಿ ಬೆಳಗಿಹುದು ನನ್ನ ಬದುಕಿನ ಭಾವ,
ನಿನ್ನ ಪುಟ್ಟ ಕೈಗಳ ಸ್ಪರ್ಶದಿ ಮರೆತಿರುವೆ ನನೆಲ್ಲಾ ನೋವ,
ನಿನ್ನ ಕಿರುನಗೆಯ ಬಗೆಗೆ ಹಸನಾಗಿಹುದು ನನ್ನ ಬಡ ಜೀವ,
ನಿನ್ನಿಂದ ಮನೆಯಾಯಿತು ಸ್ವರ್ಗ, ಕಂದಮ್ಮ ನೀನೆ ನನ್ನ ದೈವ ||

ಸೋಮವಾರ, ಫೆಬ್ರವರಿ 27, 2017

ದೀವಿಗೆ



ಕರಗಿದೆನು ನಿನ್ನ ಮೊದಲ ಅಳುವಿಗೆ
ಸೋತೆನು ನಿನ್ನ ತೊದಲ ನಗುವಿಗೆ
ತಂದಿರುವೆ ಸಂತಸವ ನೀ ನಮ್ಮ ಬದುಕಿಗೆ
ಬಂದಿರುವೆ ಬೆಳಕಾಗಿ, ಕತ್ತಲ ಬಾಳಿಗೆ ನೀನೆ ದೀವಿಗೆ