ಗುರುವಾರ, ಜನವರಿ 26, 2012

ನಿನಗೆ ಬಿಟ್ಟಿದ್ದು...


ಕಣ್ಣಿನ ಹನಿಗಳಾಗಿ ಸದಾ ಸುರಿವೆಯೊ,
ತುಟಿಯಂಚಿನ ನಗುವಾಗಿ ಬರುವೆಯೊ,
ಆಡುವ ಪದಗಳ ಮಧ್ಯೆ ಸುಳಿವೆಯೊ,
ಇಲ್ಲಾ...
ಕಾಡುವ ನೆನಪಾಗಿ ನನ್ನಲ್ಲೆ ಉಳಿವೆಯೊ???
ನಿನಗೆ ಬಿಟ್ಟಿದ್ದು...

ಅಂದಹಾಗೆ... ಭಾರತ ಮಾತೆಯ ಎಲ್ಲಾ ಕಂದಮ್ಮಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳು :)

ಶನಿವಾರ, ಜನವರಿ 21, 2012

ಅಂಗವಿಕಲ!!!



ನಿನ್ನ ದನಿ ಕಿವಿಗೆ ತಾಕದೆ,
ಬೇರೆ ಮಾತ ಕೇಳದೆ,
ಮನಸ್ಸು ಕಿವುಡಾಗಿಹುದು.
ನಿನ್ನ ಮಾತಿನ ಸುಧೆ ನೀಡು.

ನಿನ್ನ ಅಂದ ನೋಡದೆ,
ಕಣ್ಣಿಗೆ ನೀ ಕಾಣದೆ,
ಮನದಿ ಅಂಧಕಾರ ಮೂಡಿಹುದು.
ನಿನ್ನ ಸ್ಪರ್ಶದ ಆಸರೆ ನೀಡು.

ನಿನ್ನ ಹೆಸರ ಆಡದೆ,
ನಿನ್ನದೇ ಭಜನೆ ಮಾಡದೆ,
ಮನವು ಮೂಕಾಗಿಹುದು,
ನಿನ್ನ ಪ್ರೀತಿಯ ಶಕ್ತಿ ನೀಡು.

ನಿನ್ನ ಜೊತೆ ಒಡಾಡದೆ,
ಜೊತೆಗೆ ಹೆಜ್ಜೆ ಹಾಕದೆ,
ಮನಸ್ಸು ಕುಂಟುತಿಹುದು,
ನೆನಪುಗಳು ಉರುಗೋಲು ನೀಡು.

ನನ್ನೊಡನೆ ನೀನಿರಲು, ದಕ್ಕಿದಂತೆ ನನಗೆ ಸಕಲ
ಇಲ್ಲದೆ ಹೋದರೆ ನನ್ನ ಮನಸ್ಸು ಅಂಗವಿಕಲ!!!

ಮಂಗಳವಾರ, ಜನವರಿ 17, 2012

ಲೆಕ್ಕದಾಟ!!!




ಇರುವುದು ಅವನೊಬ್ಬನಾದರೂ,
ಅವನಿಗೆ ಎರಡು ಮುಖಗಳು.
ಅವನದ್ದಿಲ್ಲಿ ಮೂರು ದಿನದ ಬಾಳು,
ಕಳೆದ ಮೇಲೆ ಒಯ್ಯುವರು ನಾಲ್ಕಾಳು.
ಕೊನೆಗೆ ಪಂಚಭೂತಗಳಲ್ಲಿ ಲೀನವೆಲ್ಲ,
ಬದುಕಿರಲು ಅರಿಷಡ್ವರ್ಗಗಳ ಗೆಲ್ಲಲಾಗಲಿಲ್ಲ.
ಸಪ್ತಸಾಗರಗಳ ಆಳವ ಮೀರಿಸುವ ಆಸೆಗಳ ಲೆಕ್ಕ,
ಅಟ್ಟಹಾಸದಿ ಅಷ್ಟ ದಿಕ್ಕುಗಳನ್ನೂ ಗೆಲ್ಲುವ ತವಕ.
ನವರಸಗಳ ಭಾವಗಳಿಂದ ಕೂಡಿರುವ ಅವನು,
ಜೀವನದ ಲೆಕ್ಕದಾಟದ ಕೊನೆಗೆ ಶೂನ್ಯಕೆ ಸಮನು!!!

ಭಾನುವಾರ, ಜನವರಿ 15, 2012

ಸಂಕ್ರಾಂತಿ



ಮಂಜಿನ ಹೊದಿಕೆಯ ಸರಿಸುತ ಮೇಲೆದ್ದ ಮೂಡಣದ ರವಿ,
ಮೂಡಿದ ಹೊಂಗಿರಣಗಳ ನಡುವೆ ಹೊಳೆಯಿತು ನಮ್ಮೀ ಭುವಿ.

ಹಬ್ಬದ ದಿನವಿದು, ಸುಳಿದಾಡಿದೆ ಎಲ್ಲೆಲ್ಲೂ ಸಡಗರ ಸಂಭ್ರಮದ ವಾತಾವರಣ,
ರಂಗೋಲಿ, ಹಸಿರು ತೋರಣದಿ ಸಿಂಗರಿಸಿಕೊಂಡಿವೆ ಪ್ರತಿ ಮನೆಯ ಆವರಣ.

ಜೀವನದ ಕಹಿಯ ಬಡಿದು ಓಡಿಸಲಿ ಕಬ್ಬಿನ ಸಿಹಿ,
ಮನದಲ್ಲಿ ಒಳಿತನ್ನು ಮೂಡಿಸಲಿ ಎಳ್ಳು-ಬೆಲ್ಲದ ಸವಿ.

ಎಲ್ಲರಲ್ಲೂ ಹೊಸ ಚೈತನ್ಯದ ಕಿರಣಗಳ ಮೂಡಿಸಲಿ ಉತ್ತರಾಯಣ,
ನಿಮಗೆಲ್ಲರಿಗೂ ಸುಖ-ಶಾಂತಿಯ ತರಲಿ ಈ ಮಕರ ಸಂಕ್ರಮಣ.

ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು!!!

ಭಾನುವಾರ, ಜನವರಿ 01, 2012

ಹೊಸ ವರ್ಷದ ಶುಭಾಶಯಗಳು




ನಡೆದ ಕಹಿಗಳನ್ನೆಲ್ಲಾ ಕರಗಿಸಿಬಿಡಲಿ ಭೂತದ ಕುಲುಮೆ,
ಈ ದಿನ ಪ್ರತಿ ಕ್ಷಣ ಮೂಡಿರಲಿ ನಿಮ್ಮಲ್ಲಿ ಸಂತಸದ ಚಿಲುಮೆ,
೨೦೧೨ರ ನಿಮ್ಮ ಭವಿಷ್ಯವ ತುಂಬಿರಲಿ ನಿಮ್ಮವರ ಸಿಹಿ ಒಲುಮೆ.

ಕನ್ನಡದ ಕುಲಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
:)