ಭಾನುವಾರ, ಏಪ್ರಿಲ್ 08, 2012

ಬೆಂಗಳೂರು ಕರಗ
ಕತ್ತಲು ತುಂಬಿದ ಭುವಿಯ ತೋಯ್ದ ಬೆಳದಿಂಗಳ ಸಾಗರ,
ಆ ದೃಶ್ಯವ ನೋಡಲು ಮೂಡಿತ್ತು ಆ ಚಂದಿರನಿಗೂ ಕಾತುರ.

ಭಕ್ತಿಭಾವದ ಲೆಕ್ಕವಿಲ್ಲದಷ್ಟು ಅಲೆಗಳು ಆ ಸಾಗರದಿ ಎದ್ದವು,
ಭಕ್ತಿಯ ಆ ಪ್ರತಿ ಅಲೆಯಲ್ಲೂ ಸಕಲ ಜೀವಗಳು ಮಿಂದವು.

ಎಲ್ಲರ ಕಣ್ಣಲ್ಲೂ ಅದೇನೊ ಕಂಡು ಧನ್ಯರಾಗುವ ತವಕ,
ಮನದಲ್ಲಿ ಮೂಡಿರಲು ಸಂತಸ, ತನುವಲ್ಲಿ ಭಕ್ತಿಯ ಪುಳಕ.

ಕಂಡಿದ್ದೆ ತಡ ನೆರೆದಿದ್ದ ಮಾನವ ಕುಲಕೋಟಿಯಲ್ಲಿ ಹರ್ಷೋದ್ಗಾರ,
ಕಷ್ಟಗಳು ತುಂಬಿ ಹಾಳಾಗಿದ್ದ ಮನಸಿನರಮನೆಯ ಜೀರ್ಣೊದ್ದಾರ.

ಚೈತ್ರ ಚಂದ್ರಮನೂ ಆಚರಿಸಿದನಂದು ನಮ್ಮ ಕರಗದ ಹಬ್ಬವ,
ಎಲ್ಲಾ ಜನತೆಯು ಸೇರಿ ಸಡಗರದಿ ನಡೆಸಿತು ಕರಗದ ಉತ್ಸವ.

ಗೋವಿಂದನ ನಾಮಸ್ಮರಣೆಯಲ್ಲಿ ಸಾಗಿತ್ತು ಆದಿಶಕ್ತಿಯ ಕರಗ,
ಉಳಿಸುತ್ತ ನಮ್ಮ ಸಂಸ್ಕೃತಿ, ಬೆಳೆಸುತ್ತ ಬೆಂಗಳೂರಿನ ಮೆರುಗ!!!

ಶನಿವಾರ, ಏಪ್ರಿಲ್ 07, 2012

ಪಾತರಗಿತ್ತಿ
ಸಮಯವೆಂಬ ಕಂಬಳಿ ಹುಳುವು ಕೊರೆದಿದೆ,
ನನ್ನಲ್ಲಿ ಮೂಡಿದ ನಿನ್ನ ನೆನಪುಗಳೆಂಬ ಪುಷ್ಪಗಳ.
ನನ್ನ ಕೈಗೆ ಸಿಗದೆ, ಅದೆಲ್ಲೊ ಇದ್ದು ಅಳಿಸಿದೆ,
ಜೊತೆಗೆ ಕಳೆದ ಕ್ಷಣಗಳ ಸುಂದರ ಚಿತ್ತಾರಗಳ.
ಹೀಗಿದ್ದರೂ ನನ್ನಲ್ಲಿ ಆಸೆಯೊಂದು ಜನಿಸಿದೆ,
ಹುಳುವು ಆಗಿ ಪಾತರಗಿತ್ತಿ,
ಹೊತ್ತು ತರಲಿ ನಿನ್ನ ಒಲವಿನ ಸಿಹಿ ಹನಿಗಳ!!!