ಮಂಗಳವಾರ, ನವೆಂಬರ್ 13, 2012

ಬದುಕಿನ ಹಣತೆ




ಕತ್ತಲ ಆವರಣ ಇನ್ನೆಲ್ಲಿ ಮನೆಗಳಲಿ ಹಣತೆಗಳ ಹಚ್ಚಿರಲು,
ದುಷ್ಟ ಶಕ್ತಿಗಳ ಸುಳಿವೆಲ್ಲಿ ಮನಗಳಲಿ ವಿಶ್ವಾಸದ ಕಿಚ್ಚಿರಲು.

ಒಂದು ಕಿಡಿ ಬೆಂಕಿ ಸಾಕು ಕತ್ತಲೆಂಬ ರಕ್ಕಸನ ಕೊಲ್ಲಲು,
ಒಳ್ಳೆ ಜನರ ಸಂಗ ಬೇಕು ಬದುಕಿನ ಯುದ್ಧವ ಗೆಲ್ಲಲು.

ಕೈ ಕೈ ಹಿಡಿದು ಮನಗಳ ಬೆಸೆದು, ಹಣತೆಯನು ಹಚ್ಚುವ ಈ ಜಗದಿ
ಬೆಳಗಲಿ, ಅರದೆ ಉರಿಯಲಿ ಆ ಪ್ರೀತಿಯ ಬೆಳಕು ಯುಗ ಯುಗದಿ.

ಅಂಧಕಾರವ ಮನದಿಂದ ಬಡಿದೋಡಿಸಿ, ಒಳ್ಳೆಯದನ್ನು ಅಲ್ಲಿಗೆ ಬರಮಾಡಿಸಿ,
ಎಲ್ಲರಿಗೂ ಆರೈಕೆಗಳ ಬಡಿಸಿ, ತೆರೆದ ಮನದಿಂದ ದೀಪಾವಳಿಯ ಆಚರಿಸಿ.

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು :)

ಗುರುವಾರ, ನವೆಂಬರ್ 01, 2012

ಕನ್ನಡಾಂಬೆ



ಅರ್ಪಿಸಿದರು ನುಡಿ ಪುಷ್ಪಗಳ ಮಾಲೆಯನು ನಿನಗೆ,
ಆದರೆ ನನ್ನದು ನಿನ್ನ ಪಾದದಿ ಇರುವ ಹೂವಿನ ಎಸಳು.

ಬೆವರು ಸುರಿಸಿ, ನೆತ್ತರು ಹರಿಸಿದರು ಕನ್ನಡ ಗುಡಿಗೆ,
ಸದಾ ಹರಿದಾಡಲಿ ನಮ್ಮ ಮೇಲೆ ಆ ಕಲಿಗಳ ನೆರಳು.

ಎಲ್ಲೂ ಇರದ, ಬೇರೆಲ್ಲೂ ಸಿಗದ ಶಕ್ತಿ ಕನ್ನಡ ನುಡಿಗೆ,
ತೊಟ್ಟಿರುವಳು ಕನ್ನಡಾಂಬೆ ತನ್ನ ಮಕ್ಕಳ ಅಭಿಮಾನದ ಹರಳು.

ಸಮಸ್ತ ಕನ್ನಡ ಕುಲ ಕೋಟಿಗೆ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು :)