ಶುಕ್ರವಾರ, ನವೆಂಬರ್ 25, 2011

ಅಳು-ನಗು


ಅಳುವಿನ ಕೊನೆಯಲ್ಲಿ ಹುಚ್ಚು ನಗೆ ಇದೆ
ಹುಚ್ಚು ಹೆಚ್ಚಾಗಿದೆ ಎಂದು ಜನ ತಿಳಿದರೂ ಸರಿ
ಮನಸ್ಸು ಬಿಚ್ಚಿ ಜೋರಾಗಿ ನಕ್ಕು ಬಿಡಿ
ಆ ನಗುವಿನ ಅಲೆಯಲ್ಲಿ ಬೇಸರವು ಕೊಚ್ಚಿಹೋಗಲಿ.

ನಗುವಿನ ಅಂಚಿನಲ್ಲಿ ಕಣ್ಣು ತುಂಬುವ ಅಳುವಿದೆ
ಅದು ಮನವು ಸಂತಸವ ತೋರಿಸುವ ಪರಿ
ಮೂಡಿದ ಹನಿಗಳು ಹಾಗೆ ಇರಲಿ ಬಿಡಿ
ಆ ಹನಿಗಳ ಹೊಳಪಿನಲಿ ಮನವು ಹಗುರಾಗಲಿ.

ಬುಧವಾರ, ನವೆಂಬರ್ 23, 2011

ದೇವದಾಸ!!!


ನನ್ನ ನೋಡಿ ನೀ ನಕ್ಕಾಗ ನನ್ನೆದೆಯಲ್ಲಿ ಹಾಕಿದಂತಾಯಿತು ಮುನ್ನೂರು ಅಡಿ ಬೋರು,
ನಿನ್ನ ಮನದ ಊರಿನ ಒಳಗೆ ನನ್ನನ್ನು ಸೇರಿಸಬಾರದೇ ತಟ್ಟಲು ನಾನದರ ಡೋರು,
ಆ ಊರಿನ ರಸ್ತೆಗಳನ್ನು ಸಿಂಗರಿಸು, ಹೊರಡಲು ತಯಾರಾಗಿದೆ ನನ್ನ ಪ್ರೀತಿಯ ತೇರು,
ನನ್ನ ಪೂಜೆಗೆ ನೀ ಒಲಿದರೆ, ಸಂಭ್ರಮವು ಮೂಡಿ ಎಲ್ಲೆಲ್ಲೂ ಹಬ್ಬದ ಜೋರು,
ನಿನ್ನನು ನಾ ಪಡೆಯದ್ದಿದ್ದರೆ ನನ್ನಲ್ಲಿ ಬೇಸರವು ಪಸರಿಸಿ ಹರಿಯುವುದು ಕಣ್ಣೀರು,
ಆಗಿಬಿಡುವೆ ದೇವದಾಸ, ನೆನಪಾದರೆ ಹಿಂಬಾಲಿಸುವ ನಾಯಿ ಮನೆಯೇ ಬಾರು!!!

ಸೋಮವಾರ, ನವೆಂಬರ್ 21, 2011

ಅಕ್ಕಿಯಲ್ಲಿ ಕಲ್ಲು!!!


ಅಮ್ಮಳು ಅಕ್ಕಿ ಆರಿಸುವಾಗ ಕಂಡೆ ಅದರಲ್ಲೊಂದು ಸಣ್ಣ ಕಲ್ಲು,
ತಲೆಕೆಡಿಸಿಕೊಳ್ಳಲಿಲ್ಲ, ಊಟವ ನೆನೆದು ಮೂಡಿತ್ತು ಬಾಯಲ್ಲಿ ಜೊಲ್ಲು,
ಅನ್ನವು ಸಿದ್ಧ, ಗಬಗಬನೆ ತಿನ್ನತೊಡಗಿದಾಗ ಕಾಣಿಸಿತು ಮತ್ತದೇ ಕಲ್ಲು,
ತುಸುನಕ್ಕು, ತಟ್ಟೆಯ ಬದಿಗೆ ಸರಿಸುತ್ತ ಹೇಳಿದೆ ಅದಕ್ಕೆ ನೀನಲ್ಲೆ ನಿಲ್ಲು,
ತುತ್ತುಗಳು ಸೇರುತ್ತಿದ್ದವು, ಒಮ್ಮೆಲೆ ಕೇಳಿಸಿತು ಬಾಯಿಂದ ಕಟುಂ ಎಂಬ ಸೊಲ್ಲು,
ಕಲ್ಲಿರಬಹುದೆಂದು ತಿಳಿದು ಬಾಯನ್ನು ತೆರೆದು ನೋಡಲು ಉರುಳಿತ್ತು ನನ್ನ ಹಲ್ಲು!!!

ಸಮಸ್ಯೆಯು ಚಿಕ್ಕದಿರಬಹುದೆಂದು ತಿಳಿದು, ನಿಮ್ಮದಾಗಿದ್ದರೆ ನಿರ್ಲಕ್ಷಿಸುವ ಮತಿ
ಮುಂದೊಂದು ದಿನ ಚಿಕ್ಕ ಸಮಸ್ಯೆಯೂ ದೊಡ್ಡದಾಗಿ ನಿಮ್ಮ ಗತಿ ಅಧೋಗತಿ!!!

ಬುಧವಾರ, ನವೆಂಬರ್ 09, 2011

ಶಂಕರ್ ನಾಗ್


ಅದೆಷ್ಟೋ ಕಣ್ಗಳನು ತೆರೆಸುತ್ತ, ನೀವು ಮುಚ್ಚಿರಬಹುದು ನಿಮ್ಮ ಕಣ್ಗಳನು,
ನೀವು ತೆರೆಸಿದ ಆ ಕಣ್ಗಳು ಕಾಣುತ್ತಿವೆ ನಿಮ್ಮ ಕನಸುಗಳು ನನಸಾಗುವುದನು,
ಎಲ್ಲಾ ಕನ್ನಡಿಗರು ಕಾಣುವ ಕನಸೊಂದೇ ನೀವು ಪಡೆಯಬೇಕು ಮರು ಹುಟ್ಟನು,
ನಮ್ಮೆಲ್ಲರ ಅಭಿಮಾನಕೆ ತಲೆ ಬಾಗಿ ನಮ್ಮ ಬಳಿ ಬರಲು, ಮತ್ತೇಕೆ ತಡವಿನ್ನು!!!

ನೀವು ಎಲ್ಲೇ ಇದ್ದರೂ... ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಂಕರಣ್ಣ!!!

ಸೋಮವಾರ, ನವೆಂಬರ್ 07, 2011

ಆಲದ ಮರ


ದೂರದಿಂದ ನೋಡಿದೆ ಅಲ್ಲಿ, ನಿಂತಿದ್ದರು ನಾಲ್ವರು ಕುಳಿತಿದ್ದರು ಮಗದೊಬ್ಬರು,
ಆ ಮೂವರು ನಿಂತದ್ದು ಕಂಡಿತು ಅಶ್ವತ ಕಟ್ಟೆಯ ಮುಂದೆ ನಿಂತ ಭಕ್ತರ ಹಾಗೆ,
ಆಲದ ಮರದಂತಿದ್ದ ಕುಳಿತಿದ್ದವರ ಮಾತುಗಳ ಕೇಳುತ್ತ ಎಲ್ಲರು ಮಂತ್ರಮುಗ್ಧರು,
ಬಿಸಿಲಿನಿಂದ ಒಣಗಿದವಗೆ ನೆರಳು ಸಿಕ್ಕಂತಾಯಿತು ಅವರನ್ನು ನೋಡಿ ನನಗೆ.

ನಾನೂ ಅಲ್ಲಿಗೆ ಹೋಗಿ ಆ ಆಲದ ಮರಕ್ಕೆ ಭಕ್ತಿಯಿಂದ ಕೈ ಮುಗಿಯಬೇಕೆನಿಸಿತು,
ತಡಮಾಡಲಿಲ್ಲ ಒಂದು ಕ್ಷಣವು ಕೂಡ, ಹೋಗಿ ನಿಂತೆ ಆ ಪುಣ್ಯಾತ್ಮರ ಎದುರು,
ಮನದ ಮಾತಗಳನ್ನು ಪದಗಳಲಿ ಸೆರೆಹಿಡಿದ ಕೈ, ಕಾಲಿಗೆರಗಿದ ನನ್ನನು ಆಶೀರ್ವದಿಸಿತು,
ಆ ಕಣ್ಗಳಲಿ ಇನ್ನೂ ಬತ್ತದ ಉತ್ಸಾಹ, ಮಾತುಗಳಲ್ಲಿ ಕುಗ್ಗದ ಭಾವಗಳ ನವಿರು.

ಆ ಮರದಡಿಯಲ್ಲಿ ಯಾರೇ ನಿಂತರೂ ಮೂಡೂವುದು ಅವರಲ್ಲಿ ಕಾವ್ಯದ ಚಿಗುರು,
ಆಶಯವೊಂದೇ.. ಚಿರವಾಗಿರಲಿ ಆ ಮರವು, ಚಿರಂತನವಾಗಲಿ ಅದರ ಕೃತಿಗಳೆಂಬ ಬೇರು!!!

ನಿತ್ಯೋತ್ಸವದ ಮಹಾನ್ ಕವಿ ನಿಸಾರ್ ಅಹ್ಮದ್ ಅವರನ್ನು ಭೇಟಿ ಮಾಡಿದ ಸಂದರ್ಭ :)

ಶನಿವಾರ, ನವೆಂಬರ್ 05, 2011

ಪಂಚಭೂತಗಳು


ಸಿಂದೂರದಿಂದ ಸಿಂಗರಿಸಿಕೊಂಡ ನಿನ್ನ ಹಣೆಯು ಆಗಸದ ಹಾಗೆ,
ಆ ನಿನ್ನ ಕಣ್ಗಳ ನೋಟವು ಹಚ್ಚಿದ ಬೆಂಕಿಗೆ ನಾ ಕರಗಿ ಹೋದೆ,
ತೇಲಿದೆ ನಾ ಕಿವಿಗಳಲಿ ನೀ ಪಿಸುಗುಟ್ಟಿದ ಮಾತುಗಳ ಬಿಸಿಗಾಳಿಗೆ,
ಝರಿಯಂತೆ ಇಳಿದಿರುವ ಮುಂಗುರುಳಲ್ಲಿ ನಾನಾಡಿದೆ ಪದೆ ಪದೆ,
ನನ್ನ ಮುತ್ತುಗಳ ಮಳೆಯ ಸುರಿಸುವೆ ನಿನ್ನ ಕೆನ್ನೆಯೆಂಬ ಧರಣಿಗೆ,
ಮೊಗದ ಅಕೃತಿಯಲ್ಲಿ ಪಂಚಭೂತಗಳಿರುವ ಸುಂದರ ಪ್ರಕೃತಿ ನಿನ್ನದೆ.
ತೋರಿಸಲು ಮಗದೊಮ್ಮೆ ನಿನ್ನ ಚೆಲುವ, ನಾನದರಲ್ಲಿಯೇ ತಲ್ಲೀನ,
ಇಲ್ಲದಿದ್ದರೆ ಸತ್ತ ನನ್ನ ಆಸೆಗಳೆಲ್ಲವೂ ಪಂಚಭೂತಗಳಲ್ಲಿ ಲೀನ!!!

ಮಂಗಳವಾರ, ನವೆಂಬರ್ 01, 2011

ಹೆಮ್ಮೆಯ ಕನ್ನಡಿಗರು ನಾವು!!!


ಪ್ರೀತಿಯ ಕನ್ನಡಿಗರು ನಾವು ಕನ್ನಡಿಗರೆಂಬ ಹೆಮ್ಮೆ ನಮಗಿರಲಿ,
ಕನ್ನಡವನ್ನು ಬೆಳೆಸೋಣ, ನಮ್ಮೆಲ್ಲರಲ್ಲಿ ಕನ್ನಡವು ಸದಾ ನಲಿದಾಡಲಿ.

ಕನ್ನಡದ ನೆಲದಿ ತಲೆಯೆತ್ತಿ ಬೀಗಿ ನಡೆದರು ಅದೆಷ್ಟೊ ವೀರರು,
ಈ ಮಣ್ಣಿನ ಸೊಗಡನ್ನು ಅನಾವರಣಗೊಳಿಸಿದರು ಈ ನಾಡಿನ ಕವಿವರ್ಯರು.

ಕನ್ನಡದಲ್ಲಿ ಒಂದು ಪದವನ್ನಾಡಿದರೂ ಅದು ಸುಮಧುರ ಸ್ವರದಂತೆ,
ಈ ನೆಲದಿ ಜನ್ಮ ಪಡೆದಿರುವುದು, ನಮಗೆ ಆ ದೇವರು ಕೊಟ್ಟಿರುವ ವರವಂತೆ!

ಕನ್ನಡ ರಾಜ್ಯೋತ್ಸವವೆಂಬುದು ಆಗದಿರಲಿ ಒಂದು ದಿನದ ಸಡಗರವಾಗಿ,
ಕನ್ನಡವಾಗಲಿ ಚಿರಂತನ, ಹಾರುತಿರಲಿ ಕನ್ನಡದ ಬಾವುಟ ನಿರಂತರವಾಗಿ.

ಎಲ್ಲರಿಗು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಜೈ ಕರ್ನಾಟಕ ಮಾತೆ!!!