ಬುಧವಾರ, ಸೆಪ್ಟೆಂಬರ್ 19, 2012

ಲಂಬೋದರ




ಮೋದಕದ ನೈವೇದ್ಯವು ನಿನಗೆ ಹೇ ಲಂಬೋದರ,
ವಿಘ್ನಗಳಿಂದ ನಮ್ಮನ್ನು ರಕ್ಷಿಸು ಬಾ ಕರುಣಾಸಾಗರ.

ಭಕ್ತಿಭಾವದಿ ನಿನ್ನ ನಮಿಪೆವು ಕರಗಳ ಜೋಡಿಸಿ,
ಭವಲೋಕದಿ ಭಜಿಪೆವು ನಿನ್ನ ನಾಮಗಳ ಪೋಣಿಸಿ.

ನಿನ್ನ ಹಬ್ಬದಿ ನೆಲೆಸಲಿ ಸಂತಸ ಪ್ರತಿ ಮನೆಯಲ್ಲೂ,
ನೆಮ್ಮದಿ ಸೌಖ್ಯವು ತುಂಬಿರಲಿ ಎಲ್ಲರ ಮನಸಲ್ಲೂ.

ಶುಕ್ರವಾರ, ಸೆಪ್ಟೆಂಬರ್ 14, 2012

ಸ್ವಾರ್ಥ



ಸಂಬಂಧಗಳೆಂಬ ವೃಕ್ಷಗಳ ನೆರಳಲಿ ಬದುಕುವ ಮನುಜಗೆ,
ತನ್ನ ಜೀವನದಿ ಸಿಗುವ ಸಂಬಂಧಗಳು ಹಲವು ಬಗೆ.

ಕೆಲವು ಹೆಮ್ಮರದಂತೆ ನಿಂತರೆ, ಕೆಲವದ್ದು ಬರಡಾಗಿ ನಿಂತ ಆಕಾರ,
ಕೆಲವು ಇನ್ನೇನು ಬೀಳುವಂತಿದ್ದರೆ, ಇನ್ನೂ ಕೆಲವದ್ದು ಸಸಿಯ ಪ್ರಕಾರ.

ಹೀಗೆ ಇರಬಹುದು ಹಲವು ವಿಧದ ಸಂಬಂಧಗಳು, ನೂರು
ಆದರೀ ಸಂಬಂಧಗಳ ಬುಡದಲಿ ಇಹುದು ಸ್ವಾರ್ಥದ ಬೇರು

ಸಂಬಂಧವು ಚಿಕ್ಕದಾದರೂ, ಇರದಿರಲಿ ಅದರಲ್ಲಿ ಸ್ವಾರ್ಥವು
ಆಗಲೇ ದೊರೆಯುವುದು ಆ ಸಂಬಂಧಕೆ ನಿಜ ಅರ್ಥವು!

ಮಂಗಳವಾರ, ಸೆಪ್ಟೆಂಬರ್ 04, 2012

ಗಾಳ



ನಿನ್ನ ಕಣ್ಣೋಟದ ಸಾಗರದಿ ನಾ ಮುಳುಗಿದ್ದಾಯಿತು
ಹೊರಬರುವ ಮನಸ್ಸಿಲ್ಲದೆ ಅಲ್ಲೇ ಉಳಿದದ್ದಾಯಿತು

ಇನ್ನೇನಿದ್ದರು ನಿನ್ನ ಆಸೆಗಳೆಂಬ ಮೀನುಗಳೊಡನೆ ನನ್ನ ವಾಸ,
ಗಾಳವ ಬೀಸಿ ಹಿಡಿದಿಕೊ ನನ್ನ, ಕೊನೆಯಾಗಲಿ ಪ್ರೀತಿ ಉಪವಾಸ.

ನಿನಗೆ ಇಷ್ಟವಿಲ್ಲದಿದ್ದರೇನು, ಎಸೆದು ಬಿಡು ಎನ್ನ ಮತ್ತದೇ ಸಾಗಾರಕೆ
ಕಾತುರದಿ ಕಾಯುವೆ ಮತ್ತೆ ಸಿಕ್ಕಿಬೀಳಲೆಂದು ನಿನ್ನ ಮನಸಿನ ಗಾಳಕೆ!!!