
ನಿನ್ನ ಮೊಗದಲ್ಲಿ ನಗುವಿಲ್ಲದಿರಲು, ನನ್ನ ಮನದಲ್ಲಿ ಅಮಾವಾಸೆಯ ಕತ್ತಲು,
ನಗು ಅರಳಲು, ಮನದಿ ಚೆಲ್ಲಿದ ಬೆಳದಿಂಗಳಲ್ಲಿ ನನ್ನ ಆಸೆಗಳೆಲ್ಲವೂ ಬೆತ್ತಲು||
ಕಂಗಾಲಾಗಿದ್ದ ನನ್ನ ಒಂಟಿ ಹೃದಯಕೆ ಆ ನಿನ್ನ ಕುಡಿ ನೋಟವು ಮುತ್ತಲು,
ಆ ಮುತ್ತಿನ ಮತ್ತಿಗೆ ಮರೆತೇ ಬಿಟ್ಟೆ ನಾ, ನನ್ನ ಸುತ್ತ-ಮುತ್ತಲು!!!
ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು. ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ. ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು. ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ. ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!