ಮಂಗಳವಾರ, ಮಾರ್ಚ್ 13, 2012

ಕಂಬದ ದೀಪ!!!



ನಾಲ್ಕು ರಸ್ತೆಗಳು ಕೂಡುವ ಆ ನಿಬಿಡ ಜಾಗದಿ
ಹಸಿರಿನಿಂದ ಕೆಂಪಿಗೆ ತಿರುಗಿದ ಕಂಬದ ದೀಪ.
ಅಲ್ಲಿಯವರೆಗು ಓಡುತಿದ್ದವು ಗಾಡಿಗಳೆಲ್ಲವು ಶರವೇಗದಿ,
ನಿಂತವು ಅವೆಲ್ಲವು, ಹಾಕಿದರೆಲ್ಲರೂ ಅದಾರಿಗೊ ಶಾಪ.

ಕಣ್ಣಿನಲ್ಲಿ ಬಿದ್ದ ಧೂಳನು ಒರೆಸಿ ನೋಡಲು,
ಅವನಿಗೆ ಕಂಡಿದ್ದು ತೆರೆದ ಒರಟು ಕೈಗಳು.
ಚಾಚಿದ ಆ ಕೈಗಳು ದುಡ್ಡನು ಬೇಡಲು,
ಕುಪಿತಗೊಂಡ ಅವನು ನೀಡಿದ್ದು ಬೈಗಳು.

ಮುಂದೆ ಸಾಗಿದವು ಆ ಕೈಗಳು ಮಗದೊಬ್ಬನನು ಬೇಡುತ,
ಅವನೋ, ಗೊಣಗಿದ "ಇದಕ್ಕಿಂತ ಸಾಯುವುದೇ ಲೇಸು"!!!
ಅದ ಕೇಳರಿಯದಂತೆ, ಎಲ್ಲರನು ಬೇಡುತ್ತ ಹೊರಟಿತು,
ಕೊನೆಗೂ ಆದಾವನೋ ಪುಣ್ಯಾತ್ಮ ಕೊಟ್ಟ ಪುಡಿಗಾಸು.

ಕೆಂಪು ಹಸಿರಾಗುವ ಸಮಯ ಅದಾಗಲೆ ಶುರುವಾಗಿತ್ತು,
ಮೆಲ್ಲನೆ ಮುಚ್ಚಿದ ಆ ಕೈಗಳು ಅಲ್ಲಿಂದ ಸರಿದಿತ್ತು,
ಮತ್ತೆ ಹಸಿರು ಕೆಂಪಾಗುವುದ ಕಾಯುತ್ತ, ಬದಲಾಗಬಾರದೇ ಕಂಬದ ದೀಪ ಎಂದು ಬೇಡುತ್ತ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ