ಗುರುವಾರ, ಡಿಸೆಂಬರ್ 26, 2013

ಜಿ.ಎಸ್.ಎಸ್


ತೀರದ ಮನದ ಭಾವಕೆ,
ಅರ್ಪಿಸಿದರು ತಮ್ಮ ತನು ಮನ.
ತೀರಿದ ಕವಿ ಜೀವಕೆ,
ಎರಡು ಸಾಲಿನ ಪುಟ್ಟ ಪದ ನಮನ.

ಗುರುವಾರ, ಡಿಸೆಂಬರ್ 19, 2013

ಬೈರಾಗಿ


ಅಂದುಕೊಂಡಿದ್ದೆಲ್ಲಾ ನಡೆದು ನೀ ಗೆದ್ದರೆ ನಿನ್ನ ಹಿಂದೆ ಜಗದ ಬಲವಿದೆ
ಅಂದುಕೊಂಡಿದ್ದು ನಡೆಯದೆ ಸೋಲುಂಡರೆ ನಿನ್ನೆದುರಿಗೆ ಕಷ್ಟದ ಬದುಕಿದೆ||

ಕ್ರೂರ ಜಗವಿದು, ಗೆಲುವಿನಲ್ಲಿ ನೀ ಮೆರೆವಾಗ ಎಲ್ಲವೂ ನಿನ್ನದೆ, ನೀ ಭೋಗಿ
ಸೋತು ಬರಿಗೈಲಿ ಇರುವಾಗ, ತಪ್ಪೆಲ್ಲವೂ ನಿನ್ನದೆ, ನೀ ಒಂಟಿ ಬೈರಾಗಿ!!!

ಶುಕ್ರವಾರ, ನವೆಂಬರ್ 29, 2013

ತೇರು



ನಿನ್ನೊಡನೆ ಕಳೆದ ಸವಿಕ್ಷಣಗಳ ಬೇರಿಗೆ,
ಮೂಡಿಹುದು ನೆನಪಿನ ಚಿಗುರು||

ಹೊರಟಿರುವ ನಿನ್ನ ಪ್ರೀತಿ ತೇರಿಗೆ,
ಸಿಂಗಾರಗೊಂಡಿದೆ ನನ್ನೆದೆಯ ಊರು||

ಭಾನುವಾರ, ನವೆಂಬರ್ 10, 2013

ವಾಸ್ತವ



ಕಣ್ಣು ಮಿಟುಕಿಸದೆ ಅದೆಲ್ಲೋ ಕಳೆದು ಹೋಗಿರುವಾಗ ನಿನ್ನ ಸಿಹಿ ನಗುವಿನದ್ದೇ ಕಲರವ
ಕಣ್ಣು ಮುಚ್ಚಿ ಮನದ ಆಳದಿ ಮುಳುಗಿರುವಾಗ ನಿನ್ನ ನೆನಪುಗಳೇ ಆ ಕ್ಷಣಕ್ಕೆ ವಾಸ್ತವ!!!

ಶುಕ್ರವಾರ, ನವೆಂಬರ್ 01, 2013

ಕನ್ನಡಾಂಬೆ

ಕನ್ನಡ ಮಾತೆಯ ಮಡಿಲು ಪ್ರಕೃತಿ ಸೌಂದರ್ಯದ ಕಡಲು,
ಕನ್ನಡಾಂಬೆಯ ಒಡಲು ಕರುಣೆ ಮಮತೆಯ ಮುಗಿಲು!!!

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು :)


ಭಾನುವಾರ, ಅಕ್ಟೋಬರ್ 27, 2013

ದುಂಬಾಲು!!!



ನಾವಿಬ್ಬರು ಸೇರಿದ ಕ್ಷಣಗಳು ಗತಿಸಿರಬಹುದು,
ನಿನ್ನ ಸೇರುವ ಆಸೆ ಮತ್ತೆ ಮತ್ತೆ ಹುಟ್ಟಿಹುದು ನನ್ನಲ್ಲಿ.

ದುಂಬಾಲು ಬಿದ್ದಿರುವೆ ಎಂದು ನಿನಗನಿಸಬಹುದು,
ಆದರೆ ಅದ ಬಿಡೆನು ಪ್ರೀತಿ ಮೂಡುವವರೆಗು ನಿನ್ನಲ್ಲಿ!!!

ಗುರುವಾರ, ಅಕ್ಟೋಬರ್ 03, 2013

ಒಗ್ಗರಣೆ



ಅಡುಗೆಯ ಒಗ್ಗರಣೆಯಿಂದ ರುಚಿಯು ಭೋಜನ,
ಸುಖ-ದುಃಖಗಳ ಒಗ್ಗರಣೆಯಿಂದ ಸವಿಯು ಜೀವನ||



ಭಾನುವಾರ, ಸೆಪ್ಟೆಂಬರ್ 29, 2013

ಜೀವನದಿ!!!



ನಿಜ, ಸಾವನ್ನು ಯಾರೂ ಗೆಲ್ಲಲಾಗದು
ಅದುವೆ ಎಲ್ಲರು ಪಯಣಿಸುವ ಕೊನೆ ಹಾದಿ||

ಆದರೆ, ಅದರ ಭಾವನೆಗಳ ಮೆಟ್ಟಿ ನಿಲ್ಲಬಹುದು,
ಆಗ ಹರಿಯುವುದು ಎಲ್ಲರಲ್ಲೂ ಚೈತನ್ಯದ ಜೀವನದಿ||

ಬುಧವಾರ, ಆಗಸ್ಟ್ 21, 2013

ಹುಣ್ಣಿಮೆಯ ತವಕ



ಭೂತಾಯಿಗೆ ಇಂದು ಆಗಸದ ಚಂದಿರನಿಂದ ಹಾಲ ಬೆಳಕಿನ ಅಭಿಷೇಕ,
ಎಲ್ಲೆಲ್ಲೂ ಹರ್ಷದ ಹೊನಲು, ಜಡ ಕತ್ತಲ ತೊಳೆದ ಆ ಬೆಳಕಿನ ಜಳಕ,
ಮೂಡಿಹುದು ನನ್ನಲ್ಲಿ, ತಂಗಾಳಿ ತೂಗುವ ಜೋಗುಳದಿ ನಿದ್ರಿಸುವ ಪುಳಕ,
ಸವಿನೆನಪುಗಳ ಹೊದ್ದ ಮನದೊಳು ಅದಾಗಲೆ ಮುಂದಿನ ಹುಣ್ಣಿಮೆಯ ತವಕ!

ಭಾನುವಾರ, ಆಗಸ್ಟ್ 04, 2013

ಅಮೂಲ್ಯ ಸ್ನೇಹ



ಅಮೂಲ್ಯ ನಮ್ಮ ಸ್ನೇಹ, ಕೊಳ್ಳಲಾಗದು ಇದ ಕೋಟಿ ಹಣವು,
ತುಂಬಿರಲಿ ಹೀಗೆ ನಮ್ಮೀ ಸ್ನೇಹದಲ್ಲಿ ನಿಸ್ವಾರ್ಥದ ಗುಣವು.
ಇನ್ನೆಷ್ಟು ಜನ್ಮಗಳು ಬೇಕೊ ತೀರಲು ನಿಮ್ಮ ಸ್ನೇಹದ ಋಣವು,
ನಿಮ್ಮ ವಿಶ್ವಾಸವ ಸದಾ ಉಳಿಸಿಕೊಳ್ಳುವುದೇ ಜೀವನದ ಪಣವು.

ಎಲ್ಲಾ ಸ್ನೇಹಿತರಿಗೆ, ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು :)

ಮಂಗಳವಾರ, ಜುಲೈ 30, 2013

ಗುಳಿ



ಆ ನಿನ್ನ ಕೆನ್ನೆ ಗುಳಿಯ ಸುಳಿಯಲ್ಲಿ ನಾನಿರುವುದು ನಿನಗೆ ತೋರದೆ?
ನೀ ನಗುವ ಚೆಲ್ಲಿದ ಕ್ಷಣದಿಂದ, ನಾನಲ್ಲಿ ಸಿಲುಕಿರುವೆ ಹೊರ ಬಾರದೆ.
ಅದರಲ್ಲೇ ಜೀವಿಸುವ ಬಯಕೆ, ಆ ನಗುವ ತೋರು ಹೆಚ್ಚು ಕಾಡದೆ
ಇನ್ನಷ್ಟು ಮುಗುಳ್ನಗುವ ಸೂಸಿ ನನ್ನ ಕೂಡಿಹಾಕು ಬಿಡುಗಡೆಯ ನೀಡದೆ!!!

ಗುರುವಾರ, ಜುಲೈ 04, 2013

ಮನದ ಕಿಟಕಿ



ನಿನ್ನ ಸನಿಹದಿ ಕಂಡ ಪ್ರೀತಿಯ ಭಾವವು
ಮೂಡಿಸಿಹುದು ನನ್ನಲ್ಲಿ ಹೊಸ ಚೈತನ್ಯದ ಅಲೆ.

ನಿನ್ನ ಅಗಲಿಕೆಯು ತಂದ ಕಣ್ಣೀರ ಹನಿಯು
ಜಾರುತಿಹುದು ನನ್ನ ಮನದ ಕಿಟಕಿಯ ಮೇಲೆ!!!

ಅಗಲಿಕೆಯೊ? ಸನಿಹವೋ? ನಿನಗೆ ಬಿಟ್ಟ ವಿಷಯವು,
ಏನೇ ಆದರೂ ನನ್ನಲ್ಲಿ ಸುಳಿಯದು ನಿನ್ನ ಮರೆಯುವ ಕಲೆ!





ಗುರುವಾರ, ಮೇ 23, 2013

ಗುಂಡಿ-ಕೊಂಡಿ!



ನೆನ್ನೆ ಸುರಿದ ಭಾರಿ ವರ್ಷಕೆ ನಮ್ಮೂರಿನ ರಸ್ತೆಗಳಲ್ಲೆಲ್ಲಾ ಕೆಸರು ತುಂಬಿದ ಗುಂಡಿಗಳು,
ಇಂದು ಸಿಕ್ಕ ಹಣದ ಸ್ಪರ್ಶಕೆ, ಮನುಜನಲ್ಲಿ ಕಳಚಿಕೊಂಡವು ಸಂಬಂಧಗಳ ಕೊಂಡಿಗಳು!

ಕೆಸರು ತುಂಬಿದ ಗುಂಡಿಗಳಿಂದ ಕೆಟ್ಟರೆ ಬಂಡಿ, ಕಳಚಿಕೊಂಡ ಸಂಬಂಧಗಳಿಂದ ಸಾಗದು ಜೀವನದ ಬಂಡಿ!

ಶುಕ್ರವಾರ, ಮೇ 17, 2013

ಇಳೆಯಾಗಿ



ಇದ್ದೆ ನಾನಿಲ್ಲೇ ಅದೆಲ್ಲೋ ಕಳೆದುಹೋದ ಪದಗಳ ಹುಡುಕುತ್ತ,
ಮಧುರ ಭಾವಗಳು ಕಳಚಿ, ಮನವು ಆಗಿತ್ತು ಜಡಭಾವದ ಹುತ್ತ||

ಕಾತುರದಿ ಕಾಯುತಲಿದ್ದೆ ಹೊಸಚೈತನ್ಯವು ಸುರಿಸುವ ಪದಗಳ ಇಂಪು ಮಳೆಗಾಗಿ,
ಕೊನೆಗೂ ಬಂದ ಆ ವರ್ಷಕೆ, ಕಂಗೊಳಿಸಿಹುದು ಮನ, ಪದಗಳೇ ತುಂಬಿರುವ ಇಳೆಯಾಗಿ!

ಗುರುವಾರ, ಫೆಬ್ರವರಿ 28, 2013

ಸೋಲು - ಗೆಲುವು



ಸಿಹಿಯು ರುಚಿಸಲು ನಾಲಿಗೆಯು ಕಹಿಯ ಸವಿದಿರಬೇಕು
ಸುಖದ ಅರಿವಾಗಲು ಜೀವನದ ಕಷ್ಟಗಳ ತಿಳಿದಿರಬೇಕು
ಬೆಳಕನು ಅರ್ಥೈಸಲು ಕತ್ತಲ ರಾತ್ರಿಯು ಕಳೆದಿರಬೇಕು
ಗೆಲುವನು ಸಂಭ್ರಮಿಸಲು ಸೋಲು ಹತ್ತಿರ ಸುಳಿದಿರಬೇಕು.

ಈಗಿನ ಸೋಲು ಆಗಲಿ ಮುಂದಿನ ಗೆಲುವಿಗೆ ಅಡಿಪಾಯ,
ಕುಗ್ಗದೆ ಮುನ್ನುಗ್ಗು, ಅರ್ಥಪೂರ್ಣ ಆಗ ದಕ್ಕುವ ಜಯ.

ಗುರುವಾರ, ಜನವರಿ 17, 2013

ಸೂತ್ರ



ಸಾವೆಂಬುದು ನಮಗೆ ನಿರೀಕ್ಷಿತ
ಸಾಯುವ ಬಗೆ ನೆಪ ಮಾತ್ರ.

ಬಾಳಿನ ಪ್ರತಿ ಘಳಿಗೆ ಅನಿರೀಕ್ಷಿತ
ಅದಕೆ ತಾಳ್ಮೆಯೇ ನಿಜ ಸೂತ್ರ!!!

ಶನಿವಾರ, ಜನವರಿ 12, 2013

ಹೊಸತು


ಹೊಸ ವರ್ಷದ ಹೊಸ ಕವನವಿದು

ಪದಗಳು ಹಳೆಯವು, ಆದರೆ ಹೊಸತು ಈ ಭಾವ
ಅದೇ ಜಡ ದೇಹ, ಒಳಗೆ ಚೈತನ್ಯ ತುಂಬಿದ ಜೀವ.

ಕಾಡುವ ನೆನಪುಗಳು, ಆದರೂ ಬರವಣಿಗೆಯ ನೆನೆದು ಪುಳಕ
ತೀಡುವ ಯೋಚನೆಗಳು, ಆದರೂ ನಿಲ್ಲದ ಬರೆಯುವ ತವಕ.