ಭಾನುವಾರ, ಅಕ್ಟೋಬರ್ 30, 2011

ಹೆಸರೇಕೆ???


ಒಬ್ಬೊಬ್ಬರು ಒಂದೊಂದು ಜಾತಿಯ ಹೆಸರನು ಅವನಿಗಿಟ್ಟರು ಯಾರನ್ನೂ ಕೇಳದೆ,
ಆ ಕಲ್ಲಿಗೇಕೆ ಜಾತಿಯ ಹೆಸರು, ಭಕ್ತಿಯಿಂದ ಕೈಮುಗಿದರೆ ಸಾಲದೆ ಎಂದು ನಾ ಕೇಳಿದೆ,
ಹೇಳಿದರವರು, ಅದು ಹೇಗೆ ಆದೀತು? ಅವ ನಮ್ಮವ, ಅವನ ಮೇಲೆ ನಮಗೆ ಹಕ್ಕಿದೆ,
ನಿಮ್ಮ ಹಕ್ಕು ಸಾಧಿಸಲು ಅವನು ಮನೆ ಮಗನಲ್ಲ, ಸರ್ವವ್ಯಾಪಿ ಅವನೆಂದು ಹೇಳಿದೆ.

ನಾ ಹೇಳಿದನ್ನು ಕೇಳುವವರಿರಲಿಲ್ಲ, ಅವರೆಲ್ಲರು ಜಾತಿಯ ಮಂಕು ಕವಿದಿರುವ ಮೂಡರು,
ಜಾತಿಯೆಂಬ ಬೇತಾಳನನ್ನು ಸದಾ ಹೆಗಲ ಮೇಲೆ ಕೂರಿಸಿಕೊಂಡಿರುವ ಕಲಿಯುಗದ ವಿಕ್ರಮರು,
ಯಾರು ಏನೇ ಹೇಳಿದರೂ, ಆ ದೇವರು ತಮ್ಮ ಜಾತಿಯವನೆಂದು ಹೆಮ್ಮೆಯಿಂದ ನುಡಿದರು,
ಇಷ್ಟಾದರೂ, ಏನೂ ಕೇಳದಂತೆ, ಏನೂ ನಡೆಯದಂತೆ ಮುಗುಳ್ನಗುತ್ತ ಕಲ್ಲಾಗಿ ನಿಂತಿಹನು ಆ ದೇವರು!!!

ಶುಕ್ರವಾರ, ಅಕ್ಟೋಬರ್ 28, 2011

ಖಾಲಿ


ಈಗಷ್ಟೇ ಮುಗಿದಿದೆ ರಂಗು - ರಂಗಿನ ದೀಪವಳಿ,
ಎಲ್ಲೆಡೆ ಬೆಳಕಿದ್ದರೂ ನನ್ನೊಳಗೆ ಮಾತ್ರ ಖಾಲಿ ಖಾಲಿ.

ನೆಂಟರಿಷ್ಟರೆಲ್ಲಾ ಸೇರಿ ಮನೆಯನ್ನು ಆವರಿಸಿತ್ತು ಹಬ್ಬದ ಸಡಗರ,
ಹೀಗಿದ್ದರೂ ನಾನಾಗಿದ್ದೆ ಒಂಟಿ, ಮೂಡಿತ್ತು ಮನದಲ್ಲಿ ಬೇಸರ.

ಸಿಹಿಯಾಗಿರಲಿಲ್ಲ ಕಜ್ಜಾಯ, ಯೋಚಿಸಿದೆ ಏನೆಂದು ಕಾರಣ,
ತಿಳಿಯಿತು ನೀನಿರಲಿಲ್ಲವೆಂದು ಅದಕ್ಕೆ ತಪ್ಪಿತು ಪ್ರೀತಿಯ ಹೂರಣ.

ಸದ್ದು ಮಾಡುವ ಪಟಾಕಿಗಳಿಂದ ತುಂಬಿತ್ತ ನನ್ನ ಹೊರಗಿನ ಆವರಣ,
ಸದ್ದಿದ್ದರೂ ನನ್ನೊಳಗಿತ್ತು ಮೌನ, ನನ್ನೆದೆಯ ಆವರಣವು ಭಣ - ಭಣ.

ನೀ ನನ್ನ ಜೊತೆಯಲ್ಲಿದ್ದರೆ, ನನಗೆ ಪ್ರತಿ ದಿನವೂ ಬೆಳಗುವ ದೀಪಾವಳಿ,
ಹೋಗಲಾಡಿಸಿ ನನ್ನ ದುಃಖವ, ತೊಡಿಸು ಬಾ ಮನಕೆ ನಿನ್ನ ಪ್ರೀತಿಯ ಪ್ರಭಾವಳಿ.

ಮಂಗಳವಾರ, ಅಕ್ಟೋಬರ್ 25, 2011

ದೀಪಾವಳಿ


ಜಡ ಮನದ ಮೂಲೆಯ ಸೇರದಿರು ಓ ಮನುಜ,
ನಿನ್ನ ಪ್ರಪಂಚದಿಂ ಹೊರ ಬಂದು ನೋಡು ಬೆಳಕು ತುಂಬಿದ ಪ್ರಕೃತಿಯ.
ಕತ್ತಲ ಹಾದಿಯಲ್ಲಿ ನಡೆದು ಮನಸ್ಸು ಕೊಳೆಯುವುದು ಸಹಜ,
ಪ್ರೀತಿಯ ಬೆಳಕಿನಿಂದ ಎಲ್ಲೆಲ್ಲೂ ಮೂಡಿಸು ಸಹಬಾಳ್ವೆಯ ಸುಕೃತಿಯ.

ಆಶಿಸೋಣ ಕರಗಲೆಂದು ಎಲ್ಲರಲ್ಲಿರುವ ಅಂಧಕಾರದ ಕಾರ್ಮೋಡ,
ಕರಗಿ ಬೆಳಕಿನ ಮಳೆಯಾಗಿ ತೋಳೆದುಬಿಡಲಿ ಕೊಳಕು ತುಂಬಿದ ಬುದ್ಧಿಯನು.
ಆಚರಿಸೋಣ ದೀಪಾವಳಿಯ ಸದಾ ಗುನುಗುತ್ತ ಸಂತಸ-ಸಂಭ್ರಮಗಳ ಹಾಡ,
ದೀಪಗಳ ಹಾವಳಿಯು ತೊಲಗಿಸಿ ಕತ್ತಲನು ನೀಡಲಿ ಎಲ್ಲರಿಗು ಮನದ ಶುದ್ಧಿಯನು.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

ಶನಿವಾರ, ಅಕ್ಟೋಬರ್ 22, 2011

ಗಣಿತ


ಶೂನ್ಯದಿಂದ ಉದಯಿಸುವುದು ಹೊಸತೊಂದು ಜೀವ, ಎರಡು ಜೀವಗಳು ಕೂಡುತ್ತ,
ಹೊಸ ಜೀವವು ಬೆಳೆಯುತ ಸಾಗುವುದು ಬಾಳಿನ ದಾರಿಯಲಿ ತನ್ನ ಆಸೆಗಳನ್ನು ಗುಣಿಸುತ್ತ,
ಆಸೆಗಳ ಜಂಜಾಟದಲ್ಲಿ ಎಲ್ಲರಿಂದಲೂ ದೂರ ತನ್ನೆಲ್ಲಾ ಸಂಬಂಧಗಳನ್ನು ಭಾಗಿಸುತ್ತ,
ಬಾಳಿನ ಕೊನೆಯ ಶೂನ್ಯದ ಮೂಲೆಯನ್ನು ಸೇರವುದು ಇರುವುದೆಲ್ಲವನ್ನೂ ಕಳೆಯುತ್ತ.
ಎಲ್ಲರಲ್ಲೂ ಈ ಲೆಕ್ಕಾಚಾರದ ಬದುಕು ಸಾಮಾನ್ಯ ಶೂನ್ಯದ ದಡಗಳು ಮಧ್ಯೆ ಸಾಗುತ್ತ,
ಈ ಲೆಕ್ಕದ ಮರ್ಮವ ಅರಿತು, ಒಳ್ಳೆಯ ಕರ್ಮವ ಮಾಡಿದರೆ ಸುಂದರ ಬಾಳೆಂಬ ಗಣಿತ!!!

ಬುಧವಾರ, ಅಕ್ಟೋಬರ್ 19, 2011

ಪೆದ್ದ


ನಾನೊಬ್ಬ ಏನೂ ಅರಿಯದ ಪೆದ್ದನೆಂದು ನೀವೆಲ್ಲ ತಿಳಿದಿರಿ,
ನನ್ನಂತ ದಡ್ಡ ಸಿಗುವುದಿಲ್ಲ ಎಂದು ಕೇಕೆ ಹಾಕಿ ನಕ್ಕಿರಿ.

ಎಲ್ಲರು ನಗಬೇಕೆಂದರೆ ನಾನು ಪೆದ್ದನೇ ಸರಿ ಎಂದು ಸುಮ್ಮನಿದ್ದೆ,
ಆದರೆ ನನ್ನೊಳಗಿದ್ದ ಅಂತರಾತ್ಮನಿಗೆ ಬರಲಿಲ್ಲ ಆ ಕ್ಷಣದಿಂದ ನಿದ್ದೆ.

ಹೋಗಲಿ ಬಿಡು ನಮಗ್ಯಾಕೆ ನಗುವವರ ಗೊಡವೆ ಎಂದು ನಾನವನಿಗೆ ಹೇಳಲು,
ಅದಕ್ಕವನೆಂದ, ಅವರು ಯಾರು ನೀ ಪೆದ್ದನೆಂದು ನಿನ್ನ ಬುದ್ದಿಶಕ್ತಿಯ ಅಳಿಯಲು?

ನಗುವವರಿಗೆ ಬುದ್ದಿ ಕಲಿಸುವೆನೆಂದು ನನ್ನ ಅಂತರಾತ್ಮನು ನನಗೆ ಮಾತು ಕೊಟ್ಟ,
ನನ್ನ ಕೆಚ್ಚೆದೆಯನ್ನು ಬಡಿದೆಬ್ಬಿಸಿ, ನನ್ನೊಳಗೆ ಆತ್ಮವಿಶ್ವಾಸದ ಕಿಡಿಯನ್ನು ಹತ್ತಿಸಿಬಿಟ್ಟ.

ನನ್ನ ನಾ ನಿರೂಪಿಸಿಕೊಳ್ಳುವವರೆಗು ನನ್ನ ಮಾತುಗಳಿಗೆ ನಾ ಸದಾ ಬದ್ಧ,
ನನ್ನ ನೋಡಿ ನಗುವವರಿಗಿಂತಲೂ ನನ್ನದು ಒಂದು ಕೈ ಮೇಲೆಂದು ತೋರಿಸುವೆ...ನಾನಲ್ಲ ಪೆದ್ದ!!!

ಶನಿವಾರ, ಅಕ್ಟೋಬರ್ 15, 2011

ತಪಸ್ಸು!!!



ಹೇಳಿದೆ ನನ್ನ ಸುತ್ತುಮುತ್ತಲಿನ ಜನಕ್ಕೆ, ಮಾಡಬೇಕೆಂದಿರುವೆ ನಾನು ಒಂದು ತಪಸ್ಸು,
ಅವರು: ನೀನಿನ್ನು ಚಿಕ್ಕ ಹುಡುಗ, ತಪಸ್ಸಿಗೆ ಇನ್ನೂ ಇದೆ ವಯಸ್ಸು.
ನಾನು: ವಯಸ್ಸಿನ ಪರಿವೇಕೆ ಕಾಣಲು ಪ್ರೀತಿಯ ಕನಸ್ಸು???
ಅವರು: ಈ ಕನಸ್ಸುಗಳು ಸಾಮನ್ಯ, ಏಕೆಂದರೆ ನಿನ್ನದು ಹುಚ್ಚು ಮನಸ್ಸು.
ನಾನು: ಆ ಹುಚ್ಚು ಮನಸ್ಸಿನಿಂದಲೇ, ಮಾಡಿ ತೀರುವೆ ಇದನ್ನು ನನಸ್ಸು.
ಅವರು: ಇದು ನನಸ್ಸಾದರೆ, ನಿನ್ನ ಮೇಲೆ ಉಂಟಾಗುತ್ತದೆ ಎಲ್ಲರ ಮುನಿಸು.
ನನ್ನ ಉತ್ತರ...
ಮುನಿಸಾದರೂ ಸರಿಯೆ, ಮಾಡಬೇಕೆಂದಿರುವೆ ನಾನು ಪ್ರೀತಿಯ ತಪಸ್ಸು!!!

ಶುಕ್ರವಾರ, ಅಕ್ಟೋಬರ್ 07, 2011

ನಿಜ


ತಾಯಿಯ ಗರ್ಭದಿಂದ ಹುಟ್ಟು ಪಡೆಯುವುದಾದರೆ ನಿಜ,
ಕೊನೆಗೆ, ಭೂ ಮಾತೆಯ ಒಡಲ ಸೇರುವುದು ಅಷ್ಟೇ ಸಹಜ||

ಕೆಲವರೆನ್ನುವರು ಜೀವನವೆಂಬುದು ನಾಲ್ಕು ದಿನಗಳ ಜಂಜಾಟ,
ಆದರೆ ನನಗನಿಸುತ್ತದೆ ಇದು ನೋವು-ನಲಿವುಗಳ ಕಣ್ಣಾ-ಮುಚ್ಚಾಲೆ ಆಟ||

ಬಲ್ಲಿದನಾಗಿದ್ದರೆ ಬಡವರಿಗೆ ಸಹಾಯ ಹಸ್ತವ ನೀಡು,
ಇಲ್ಲದಿದ್ದರೆ ಯಾರ ಹಂಗಿಲ್ಲದೆ ಮೇಲೇಳುವ ದಾರಿಯ ನೀ ನೋಡು||

ಸುಖವೇ ಆಗಲಿ ದುಃಖವೇ ಆಗಲಿ ಇಲ್ಲುಂಟು ಕೊನೆ,
ಪಯಣ ಮುಗಿದ ಮೇಲೆ ಎಲ್ಲರಿಗೂ ದಕ್ಕುವುದು ಅದೇ ಮಣ್ಣಿನರಮನೆ!!!

ಹೀಗಿರುವಾಗ, ಎಲ್ಲದಕ್ಕೂ ಕೊನೆಯೊಂದಿದೆ ಎಂದು ನೀ ತಿಳಿದರೆ,
ಸಂತಸ, ನೆಮ್ಮದಿಗಳಿಂದ ಕೂಡಿ ಕಂಗೊಳಿಸುತ್ತದೆ ನಮ್ಮೀ ಧರೆ||

ಸರ್ವೇ ಜನಃ ಸುಖಿನೋ ಭವಂತು...

ಬುಧವಾರ, ಅಕ್ಟೋಬರ್ 05, 2011

ಮಹಿಷಾಸುರ ಮರ್ದಿನಿ!!!


ನೀನಂದು ಆ ಮಹಿಷಾಸುರನ ಕೊಂದು ಲೋಕದಲ್ಲಿ ಶಾಂತಿಯ ನೆಲಸಿದೆ,
ಅಂತೆಯೇ, ನಮ್ಮಲ್ಲಿ ಅಡಗಿರುವ ರಕ್ಕಸನನ್ನು ನೀನಿಂದು ಹೊರಗೆಳೆದು ಕೊಲ್ಲಬೇಕಿದೆ||

ದುಷ್ಟ ಶಕ್ತಿಗಳ ನಿಗ್ರಹಿಸಿ ಶಿಷ್ಟರನ್ನು ಉಳಿಸುವ ನೀನು ಮಹಾಮಾಯೆ,
ನಾವೆಲ್ಲರೂ ನಿನ್ನ ಮಕ್ಕಳಲ್ಲವೆ, ತಪ್ಪಾಗಿದ್ದರೆ ಕ್ಷಮಿಸಿ ಕಾಪಾಡು ಓ ತಾಯೆ||

ನಿನ್ನ ಕೃಪಾಕಟಾಕ್ಷ ನಮ್ಮ ಮೇಲಿದ್ದರೆ, ಸಾರ್ಥಕ ನಮ್ಮ ಭಕ್ತಿಯ ಪರಿ,
ನಮ್ಮಲ್ಲಿ ಸುಖ-ನೆಮ್ಮದಿ ಸದಾ ನೆಲಸುವಂತೆ ಮಾಡು, ಕರುನಾಡ ಚಾಮುಂಡೇಶ್ವರಿ||

ಮಂಗಳವಾರ, ಅಕ್ಟೋಬರ್ 04, 2011

ಕಲ್ಪವೃಕ್ಷ


ನೀ ನನ್ನ ಮನದ ಕಲ್ಪವೃಕ್ಷ...

ನಿನ್ನ ಜೊತೆ ಕಳೆದ ಕ್ಷಣಗಳೆಲ್ಲವೂ ಎಲೆಗಳಂತೆ,
ಉರುಳಿದರೂ, ಮತ್ತಲ್ಲಿ ಮೂಡುವುದು ಹೊಸ ಕ್ಷಣಗಳ ಚಿಗುರು||

ನಿನ್ನ ನೆನಪುಗಳೆಲ್ಲವೂ ರುಚಿಸುವ ಹಣ್ಣುಗಳಂತೆ,
ಮತ್ತೆ ಮತ್ತೆ ಬೇಕೆನಿಸುವುದು, ಎಷ್ಟು ಬಾರಿ ಸವಿದರೂ||

ನಿನ್ನ ಮಾತುಗಳೆಲ್ಲವೂ ಆಳಕೆ ಇಳಿದ ಬೇರುಗಳಂತೆ,
ಆ ಬೇರಿಗೆ ವಿಶ್ವಾಸವಾದರೆ ಮಣ್ಣು, ನಂಬಿಕೆಯೇ ನೀರು||

ನಿನ್ನ ಒಲವೆಂಬುದು ಕಂಗೊಳಿಸುವ ಪಚ್ಚೆ ಹಸಿರಿನಂತೆ,
ಈ ನನ್ನೆದೆಯ ಲೋಕಕೆ ನಿನ್ನ ಒಲವೇ ಉಸಿರು||

ಹೀಗ ಹೇಳು, ನೀನೇ ಅಲ್ಲವೆ ನನ್ನೀ ಮನದ ಕಲ್ಪವೃಕ್ಷ...