ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು. ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ. ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು. ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ. ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಗುರುವಾರ, ಡಿಸೆಂಬರ್ 20, 2012
ಮಂಗಳವಾರ, ಡಿಸೆಂಬರ್ 04, 2012
ಪ್ರೀತಿಯ ಘಳಿಗೆಗಳು
ನಿನ್ನ ಒಲವೆಂಬುದು ದಿನದ ಘಳಿಗೆಗಳಂತೆ...
ನಿನ್ನ ಕಿರುನಗೆಯ ಹೊಂಗಿರಣಕೆ ಮನವು ಇಬ್ಬನಿಯಂತೆ ಕರಗಿ ಒಲವಿನ ಕುಸುಮವು ಚಿಗುರಿತು,
ನಡುಹೊತ್ತಿಗೆ ಕೋಪ, ಅಹಂಗಳ ಸುಡು ಬಿಸಿಲಿನ ಬೇಗೆಗೆ ಅರಳಿದ ಪ್ರೀತಿ ಹೂವು ಬಾಡಿತು,
ಸಂಜೆಯಾದೊಡನೆ ಎಲ್ಲವೂ ಶಾಂತ, ಪಡುವಣದ ಸೂರ್ಯನ ಜೊತೆಗೆ ಕಮರಿದ ಕನಸುಗಳು,
ಆವರಿಸಿತು ಕತ್ತಲು, ಆಯಿತು ಮನದ ಆಗಸವು ಬೆತ್ತಲು, ಅಲ್ಲಿ ಬರೀ ನೆನಪುಗಳ ಚುಕ್ಕಿಗಳು.
ಮಂಗಳವಾರ, ನವೆಂಬರ್ 13, 2012
ಬದುಕಿನ ಹಣತೆ
ಕತ್ತಲ ಆವರಣ ಇನ್ನೆಲ್ಲಿ ಮನೆಗಳಲಿ ಹಣತೆಗಳ ಹಚ್ಚಿರಲು,
ದುಷ್ಟ ಶಕ್ತಿಗಳ ಸುಳಿವೆಲ್ಲಿ ಮನಗಳಲಿ ವಿಶ್ವಾಸದ ಕಿಚ್ಚಿರಲು.
ಒಂದು ಕಿಡಿ ಬೆಂಕಿ ಸಾಕು ಕತ್ತಲೆಂಬ ರಕ್ಕಸನ ಕೊಲ್ಲಲು,
ಒಳ್ಳೆ ಜನರ ಸಂಗ ಬೇಕು ಬದುಕಿನ ಯುದ್ಧವ ಗೆಲ್ಲಲು.
ಕೈ ಕೈ ಹಿಡಿದು ಮನಗಳ ಬೆಸೆದು, ಹಣತೆಯನು ಹಚ್ಚುವ ಈ ಜಗದಿ
ಬೆಳಗಲಿ, ಅರದೆ ಉರಿಯಲಿ ಆ ಪ್ರೀತಿಯ ಬೆಳಕು ಯುಗ ಯುಗದಿ.
ಅಂಧಕಾರವ ಮನದಿಂದ ಬಡಿದೋಡಿಸಿ, ಒಳ್ಳೆಯದನ್ನು ಅಲ್ಲಿಗೆ ಬರಮಾಡಿಸಿ,
ಎಲ್ಲರಿಗೂ ಆರೈಕೆಗಳ ಬಡಿಸಿ, ತೆರೆದ ಮನದಿಂದ ದೀಪಾವಳಿಯ ಆಚರಿಸಿ.
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು :)
ಗುರುವಾರ, ನವೆಂಬರ್ 01, 2012
ಕನ್ನಡಾಂಬೆ
ಅರ್ಪಿಸಿದರು ನುಡಿ ಪುಷ್ಪಗಳ ಮಾಲೆಯನು ನಿನಗೆ,
ಆದರೆ ನನ್ನದು ನಿನ್ನ ಪಾದದಿ ಇರುವ ಹೂವಿನ ಎಸಳು.
ಬೆವರು ಸುರಿಸಿ, ನೆತ್ತರು ಹರಿಸಿದರು ಕನ್ನಡ ಗುಡಿಗೆ,
ಸದಾ ಹರಿದಾಡಲಿ ನಮ್ಮ ಮೇಲೆ ಆ ಕಲಿಗಳ ನೆರಳು.
ಎಲ್ಲೂ ಇರದ, ಬೇರೆಲ್ಲೂ ಸಿಗದ ಶಕ್ತಿ ಕನ್ನಡ ನುಡಿಗೆ,
ತೊಟ್ಟಿರುವಳು ಕನ್ನಡಾಂಬೆ ತನ್ನ ಮಕ್ಕಳ ಅಭಿಮಾನದ ಹರಳು.
ಸಮಸ್ತ ಕನ್ನಡ ಕುಲ ಕೋಟಿಗೆ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು :)
ಭಾನುವಾರ, ಅಕ್ಟೋಬರ್ 28, 2012
ಬುಧವಾರ, ಸೆಪ್ಟೆಂಬರ್ 19, 2012
ಶುಕ್ರವಾರ, ಸೆಪ್ಟೆಂಬರ್ 14, 2012
ಸ್ವಾರ್ಥ
ಸಂಬಂಧಗಳೆಂಬ ವೃಕ್ಷಗಳ ನೆರಳಲಿ ಬದುಕುವ ಮನುಜಗೆ,
ತನ್ನ ಜೀವನದಿ ಸಿಗುವ ಸಂಬಂಧಗಳು ಹಲವು ಬಗೆ.
ಕೆಲವು ಹೆಮ್ಮರದಂತೆ ನಿಂತರೆ, ಕೆಲವದ್ದು ಬರಡಾಗಿ ನಿಂತ ಆಕಾರ,
ಕೆಲವು ಇನ್ನೇನು ಬೀಳುವಂತಿದ್ದರೆ, ಇನ್ನೂ ಕೆಲವದ್ದು ಸಸಿಯ ಪ್ರಕಾರ.
ಹೀಗೆ ಇರಬಹುದು ಹಲವು ವಿಧದ ಸಂಬಂಧಗಳು, ನೂರು
ಆದರೀ ಸಂಬಂಧಗಳ ಬುಡದಲಿ ಇಹುದು ಸ್ವಾರ್ಥದ ಬೇರು
ಸಂಬಂಧವು ಚಿಕ್ಕದಾದರೂ, ಇರದಿರಲಿ ಅದರಲ್ಲಿ ಸ್ವಾರ್ಥವು
ಆಗಲೇ ದೊರೆಯುವುದು ಆ ಸಂಬಂಧಕೆ ನಿಜ ಅರ್ಥವು!
ಮಂಗಳವಾರ, ಸೆಪ್ಟೆಂಬರ್ 04, 2012
ಶುಕ್ರವಾರ, ಆಗಸ್ಟ್ 10, 2012
ಮಂಗಳವಾರ, ಮೇ 29, 2012
ಶುಕ್ರವಾರ, ಮೇ 18, 2012
ಭಾನುವಾರ, ಏಪ್ರಿಲ್ 08, 2012
ಬೆಂಗಳೂರು ಕರಗ
ಕತ್ತಲು ತುಂಬಿದ ಭುವಿಯ ತೋಯ್ದ ಬೆಳದಿಂಗಳ ಸಾಗರ,
ಆ ದೃಶ್ಯವ ನೋಡಲು ಮೂಡಿತ್ತು ಆ ಚಂದಿರನಿಗೂ ಕಾತುರ.
ಭಕ್ತಿಭಾವದ ಲೆಕ್ಕವಿಲ್ಲದಷ್ಟು ಅಲೆಗಳು ಆ ಸಾಗರದಿ ಎದ್ದವು,
ಭಕ್ತಿಯ ಆ ಪ್ರತಿ ಅಲೆಯಲ್ಲೂ ಸಕಲ ಜೀವಗಳು ಮಿಂದವು.
ಎಲ್ಲರ ಕಣ್ಣಲ್ಲೂ ಅದೇನೊ ಕಂಡು ಧನ್ಯರಾಗುವ ತವಕ,
ಮನದಲ್ಲಿ ಮೂಡಿರಲು ಸಂತಸ, ತನುವಲ್ಲಿ ಭಕ್ತಿಯ ಪುಳಕ.
ಕಂಡಿದ್ದೆ ತಡ ನೆರೆದಿದ್ದ ಮಾನವ ಕುಲಕೋಟಿಯಲ್ಲಿ ಹರ್ಷೋದ್ಗಾರ,
ಕಷ್ಟಗಳು ತುಂಬಿ ಹಾಳಾಗಿದ್ದ ಮನಸಿನರಮನೆಯ ಜೀರ್ಣೊದ್ದಾರ.
ಚೈತ್ರ ಚಂದ್ರಮನೂ ಆಚರಿಸಿದನಂದು ನಮ್ಮ ಕರಗದ ಹಬ್ಬವ,
ಎಲ್ಲಾ ಜನತೆಯು ಸೇರಿ ಸಡಗರದಿ ನಡೆಸಿತು ಕರಗದ ಉತ್ಸವ.
ಗೋವಿಂದನ ನಾಮಸ್ಮರಣೆಯಲ್ಲಿ ಸಾಗಿತ್ತು ಆದಿಶಕ್ತಿಯ ಕರಗ,
ಉಳಿಸುತ್ತ ನಮ್ಮ ಸಂಸ್ಕೃತಿ, ಬೆಳೆಸುತ್ತ ಬೆಂಗಳೂರಿನ ಮೆರುಗ!!!
ಶನಿವಾರ, ಏಪ್ರಿಲ್ 07, 2012
ಪಾತರಗಿತ್ತಿ
ಮಂಗಳವಾರ, ಮಾರ್ಚ್ 13, 2012
ಕಂಬದ ದೀಪ!!!
ನಾಲ್ಕು ರಸ್ತೆಗಳು ಕೂಡುವ ಆ ನಿಬಿಡ ಜಾಗದಿ
ಹಸಿರಿನಿಂದ ಕೆಂಪಿಗೆ ತಿರುಗಿದ ಕಂಬದ ದೀಪ.
ಅಲ್ಲಿಯವರೆಗು ಓಡುತಿದ್ದವು ಗಾಡಿಗಳೆಲ್ಲವು ಶರವೇಗದಿ,
ನಿಂತವು ಅವೆಲ್ಲವು, ಹಾಕಿದರೆಲ್ಲರೂ ಅದಾರಿಗೊ ಶಾಪ.
ಕಣ್ಣಿನಲ್ಲಿ ಬಿದ್ದ ಧೂಳನು ಒರೆಸಿ ನೋಡಲು,
ಅವನಿಗೆ ಕಂಡಿದ್ದು ತೆರೆದ ಒರಟು ಕೈಗಳು.
ಚಾಚಿದ ಆ ಕೈಗಳು ದುಡ್ಡನು ಬೇಡಲು,
ಕುಪಿತಗೊಂಡ ಅವನು ನೀಡಿದ್ದು ಬೈಗಳು.
ಮುಂದೆ ಸಾಗಿದವು ಆ ಕೈಗಳು ಮಗದೊಬ್ಬನನು ಬೇಡುತ,
ಅವನೋ, ಗೊಣಗಿದ "ಇದಕ್ಕಿಂತ ಸಾಯುವುದೇ ಲೇಸು"!!!
ಅದ ಕೇಳರಿಯದಂತೆ, ಎಲ್ಲರನು ಬೇಡುತ್ತ ಹೊರಟಿತು,
ಕೊನೆಗೂ ಆದಾವನೋ ಪುಣ್ಯಾತ್ಮ ಕೊಟ್ಟ ಪುಡಿಗಾಸು.
ಕೆಂಪು ಹಸಿರಾಗುವ ಸಮಯ ಅದಾಗಲೆ ಶುರುವಾಗಿತ್ತು,
ಮೆಲ್ಲನೆ ಮುಚ್ಚಿದ ಆ ಕೈಗಳು ಅಲ್ಲಿಂದ ಸರಿದಿತ್ತು,
ಮತ್ತೆ ಹಸಿರು ಕೆಂಪಾಗುವುದ ಕಾಯುತ್ತ, ಬದಲಾಗಬಾರದೇ ಕಂಬದ ದೀಪ ಎಂದು ಬೇಡುತ್ತ...
ಗುರುವಾರ, ಮಾರ್ಚ್ 08, 2012
ಹೋಳಿ
ತಾಯಿ ಮಗುವಿನ ಸಂಭಾಷಣೆ:
ಮಗು : ಅಮ್ಮ,ಅಮ್ಮ ಹೋಳಿ ಅಂದರೇನು?
ಒಬ್ಬರಿಗೊಬ್ಬರು ಬಣ್ಣ ಹಚ್ಚುವುದೇನು???
ಅಮ್ಮ : ಹೌದು ಕಂದ ನನ್ನ ಮುಕುಂದ,
ಅದುವೇ ಈ ಹಬ್ಬದ ಚೆಂದ!!!
ಮಗು: ಹಾಗಾದರೆ ನಾನೀಗಲೆ ಬಣ್ಣ ತರಲೇನು?
ಅಮ್ಮ : ತಂದದ್ದಾಯಿತು ನಿನಗೆ ಕೊಂಚ ಹಚ್ಚಲೇನು...
ಸ್ನೇಹಿತರಿಬ್ಬರ ಸಂಭಾಷಣೆ:
ಅವನೆಂದ : ಇಂದು ಬೇಸರವಾಗಿದೆ ನನ್ನ ಮನಕೆ,
ಏಕೆಂದರೆ, ನನ್ನ ಬಳಿ ಇಲ್ಲ ನನ್ನಾಕೆ.
ಇವನೆಂದ : ಗೆಳೆಯ, ಇಂದು ಬಿಡು ನಿನ್ನ ಚಿಂತೆ,
ಎಲ್ಲರೂ ಬಣ್ಣ ಹಚ್ಚೋಣ,ಇಂದು ಹೋಳಿಯಂತೆ.
ಅವನೆಂದ : ಆದದ್ದಾಯಿತು... ನಡಿ ಹಬ್ಬವ ಆಚರಿಸೋಣ.
ಇವನೆಂದ : ಬಣ್ಣವ ತಂದಿರುವೆ, ನಿನ್ನಿಂದಲೆ ಶುರು ಮಾಡೋಣ!!!
ಪೇಮಿಗಳ ನಡುವಿನ ಸಂಭಾಷಣೆ:
ಅವಳು : ಭಯವಾಗುತಿದೆ ಮುಂದೇನಾಗುವುದು ಎಂದು,
ಒಪ್ಪುತ್ತಿಲ್ಲ ಅಪ್ಪ, ಅಮ್ಮ ನಮ್ಮೆಲ್ಲಾ ಬಂಧು.
ಇವನು: ಸದಾ ಜೊತೆಗಿರುವೆ, ಎಲ್ಲಿಯೂ ಹೋಗೊಲ್ಲ ನಿನ್ನ ಬಿಟ್ಟು,
ಇಂದು ಬಣ್ಣದ ಆಟವ ಆಡೋಣ ಎಲ್ಲಾ ಚಿಂತೆಗಳು ಬದಿಗಿಟ್ಟು.
ಅವಳು : ನೀನಿರಲು ಭಯವಿಲ್ಲ, ಬಣ್ಣಗಳಿಂದ ದುಃಖವ ಮರೆಮಾಚು,
ಇವನು : ಬಣ್ಣವ ಎರಚಿ ಸಂಭ್ರಮಿಸೋಣ, ಒಮ್ಮೆ ನಿನ್ನ ಕೈ ಚಾಚು!!!
ಅಮ್ಮನು ಹಚ್ಚಿದ್ದು ವಾತ್ಸಲ್ಯದ ಬಣ್ಣ,
ಸ್ನೇಹಿತರು ಹಚ್ಚಿದ್ದು ವಿಶ್ವಾಸದ ಬಣ್ಣ,
ಪ್ರೇಮಿಯು ಹಚ್ಚಿದ್ದು ಪ್ರೀತಿಯ ಬಣ್ಣ,
ಈ ಜೀವನವು ಹಚ್ಚಿದ್ದು ಕಲಿಕೆಯ ಬಣ್ಣ!!!
ಹೋಳಿ ಹಬ್ಬದ ಶುಭಾಶಯಗಳು :)
ಸೋಮವಾರ, ಮಾರ್ಚ್ 05, 2012
ಕಂಡ ಕನಸುಗಳು!!!
ಗುರುವಾರ, ಮಾರ್ಚ್ 01, 2012
ದಾರಿಯ ಮರೆತವ!!!
ಗುರುವಾರ, ಫೆಬ್ರವರಿ 09, 2012
ಮೆಲುಕು
ಮೆಲುಕು ಹಾಕುವೆ ಗುನುಗುನಿಸುವ ನಿನ್ನ ಸವಿನೆನಪನು,
ಮರೆಯಲು ಕಹಿ ತುಂಬಿರುವ ನೋವಿನ ಈ ಕ್ಷಣವನು.
ಸವಿನೆನಪಿನ ಬೆಚ್ಚನೆಯ ಸವಿಗೆ ಹೃದಯವು ಕರಗಿತು,
ಕರಗಿ ತಾನೆ, ಕಣ್ಣುಗಳಿಂದ ಪನ್ನೀರಿನಂತೆ ಹರಿಯಿತು.
ಕಣ್ಣೀರು ಒಣಗಲು, ಮೂಡಿದ ನೆನಪಿನರಮನೆ ಸವೆಯಿತು,
ವಾಸ್ತವ ಸುಳಿಯಲು, ಕಣ್ಣುಗಳಲಿ ಕಣ್ಣೀರು ಹರಿಯಿತು.
ಬೇಕಿಲ್ಲ ಎನಗೆ! ಮರೆಯುವೆ ನೀನಿಲ್ಲದ ನನ್ನ ಜಗತ್ತನು,
ಮೆಲುಕು ಹಾಕಲು, ಗುನುಗುನಿಸುವ ನಿನ್ನ ಸವಿನೆನಪನು!!!
ಮಂಗಳವಾರ, ಫೆಬ್ರವರಿ 07, 2012
ಕನಸಿನ ಕೂಸು
ಅದೆಷ್ಟೋ ಕನಸುಗಳ ಹೆತ್ತ ನನ್ನ ಮನಸ್ಸಿದು,
ಮತ್ತೊಂದು ಕನಸಿನ ಕೂಸನು ಹೆರಲು ಕಾದಿಹುದು.
ಜೀವದ ಭಾವ, ಮನದ ಆಸೆಯ ಮಿಲನದ ಕ್ಷಣವು,
ಆ ಕ್ಷಣದಿ ಮನದೊಳು ಹುಟ್ಟಿತೊಂದು ಕನಸಿನ ಕಣವು.
ಜನಿಸಿದ ಕನಸಿನ ಕೂಸಿದು, ಬೆಳೆದು ನನಸಾಗಲಿ
ಜನ್ಮವಿತ್ತ ಮನವಿದು, ಅದ ಕಂಡು ಹಸನಾಗಲಿ.
ಅದಿನ್ನೆಷ್ಟು ಕನಸುಗಳು ಒಡಲಲ್ಲಿ ಇಹುದೋ ತಿಳಿಯದು,
ಅದಾಗಲೆ ಮತ್ತೊಂದು ಕನಸಿನ ಕೂಸನು ಹೆರಲು ಕಾದಿಹುದು...
ಈ ನನ್ನ ಮನಸ್ಸು!!!
ಗುರುವಾರ, ಜನವರಿ 26, 2012
ನಿನಗೆ ಬಿಟ್ಟಿದ್ದು...
ಶನಿವಾರ, ಜನವರಿ 21, 2012
ಅಂಗವಿಕಲ!!!
ನಿನ್ನ ದನಿ ಕಿವಿಗೆ ತಾಕದೆ,
ಬೇರೆ ಮಾತ ಕೇಳದೆ,
ಮನಸ್ಸು ಕಿವುಡಾಗಿಹುದು.
ನಿನ್ನ ಮಾತಿನ ಸುಧೆ ನೀಡು.
ನಿನ್ನ ಅಂದ ನೋಡದೆ,
ಕಣ್ಣಿಗೆ ನೀ ಕಾಣದೆ,
ಮನದಿ ಅಂಧಕಾರ ಮೂಡಿಹುದು.
ನಿನ್ನ ಸ್ಪರ್ಶದ ಆಸರೆ ನೀಡು.
ನಿನ್ನ ಹೆಸರ ಆಡದೆ,
ನಿನ್ನದೇ ಭಜನೆ ಮಾಡದೆ,
ಮನವು ಮೂಕಾಗಿಹುದು,
ನಿನ್ನ ಪ್ರೀತಿಯ ಶಕ್ತಿ ನೀಡು.
ನಿನ್ನ ಜೊತೆ ಒಡಾಡದೆ,
ಜೊತೆಗೆ ಹೆಜ್ಜೆ ಹಾಕದೆ,
ಮನಸ್ಸು ಕುಂಟುತಿಹುದು,
ನೆನಪುಗಳು ಉರುಗೋಲು ನೀಡು.
ನನ್ನೊಡನೆ ನೀನಿರಲು, ದಕ್ಕಿದಂತೆ ನನಗೆ ಸಕಲ
ಇಲ್ಲದೆ ಹೋದರೆ ನನ್ನ ಮನಸ್ಸು ಅಂಗವಿಕಲ!!!
ಮಂಗಳವಾರ, ಜನವರಿ 17, 2012
ಲೆಕ್ಕದಾಟ!!!
ಇರುವುದು ಅವನೊಬ್ಬನಾದರೂ,
ಅವನಿಗೆ ಎರಡು ಮುಖಗಳು.
ಅವನದ್ದಿಲ್ಲಿ ಮೂರು ದಿನದ ಬಾಳು,
ಕಳೆದ ಮೇಲೆ ಒಯ್ಯುವರು ನಾಲ್ಕಾಳು.
ಕೊನೆಗೆ ಪಂಚಭೂತಗಳಲ್ಲಿ ಲೀನವೆಲ್ಲ,
ಬದುಕಿರಲು ಅರಿಷಡ್ವರ್ಗಗಳ ಗೆಲ್ಲಲಾಗಲಿಲ್ಲ.
ಸಪ್ತಸಾಗರಗಳ ಆಳವ ಮೀರಿಸುವ ಆಸೆಗಳ ಲೆಕ್ಕ,
ಅಟ್ಟಹಾಸದಿ ಅಷ್ಟ ದಿಕ್ಕುಗಳನ್ನೂ ಗೆಲ್ಲುವ ತವಕ.
ನವರಸಗಳ ಭಾವಗಳಿಂದ ಕೂಡಿರುವ ಅವನು,
ಜೀವನದ ಲೆಕ್ಕದಾಟದ ಕೊನೆಗೆ ಶೂನ್ಯಕೆ ಸಮನು!!!
ಭಾನುವಾರ, ಜನವರಿ 15, 2012
ಸಂಕ್ರಾಂತಿ
ಮಂಜಿನ ಹೊದಿಕೆಯ ಸರಿಸುತ ಮೇಲೆದ್ದ ಮೂಡಣದ ರವಿ,
ಮೂಡಿದ ಹೊಂಗಿರಣಗಳ ನಡುವೆ ಹೊಳೆಯಿತು ನಮ್ಮೀ ಭುವಿ.
ಹಬ್ಬದ ದಿನವಿದು, ಸುಳಿದಾಡಿದೆ ಎಲ್ಲೆಲ್ಲೂ ಸಡಗರ ಸಂಭ್ರಮದ ವಾತಾವರಣ,
ರಂಗೋಲಿ, ಹಸಿರು ತೋರಣದಿ ಸಿಂಗರಿಸಿಕೊಂಡಿವೆ ಪ್ರತಿ ಮನೆಯ ಆವರಣ.
ಜೀವನದ ಕಹಿಯ ಬಡಿದು ಓಡಿಸಲಿ ಕಬ್ಬಿನ ಸಿಹಿ,
ಮನದಲ್ಲಿ ಒಳಿತನ್ನು ಮೂಡಿಸಲಿ ಎಳ್ಳು-ಬೆಲ್ಲದ ಸವಿ.
ಎಲ್ಲರಲ್ಲೂ ಹೊಸ ಚೈತನ್ಯದ ಕಿರಣಗಳ ಮೂಡಿಸಲಿ ಉತ್ತರಾಯಣ,
ನಿಮಗೆಲ್ಲರಿಗೂ ಸುಖ-ಶಾಂತಿಯ ತರಲಿ ಈ ಮಕರ ಸಂಕ್ರಮಣ.
ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು!!!
ಭಾನುವಾರ, ಜನವರಿ 01, 2012
ಹೊಸ ವರ್ಷದ ಶುಭಾಶಯಗಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)