ಶುಕ್ರವಾರ, ಡಿಸೆಂಬರ್ 30, 2011

ಹೇಗೆ???



ನಗುವು ಹೇಗೆ ಮೂಡುವುದು ನನ್ನಲ್ಲಿ,
ಕಾಣದೆ ನೀನಿರುವಾಗ ಮರೆಯಲ್ಲಿ.
ಅಳುವು ಹೇಗೆ ನಿಲ್ಲುವುದು ಕಣ್ಣಲ್ಲಿ,
ಕಾಣುತ ನೀ ಉಳಿದಿರುವಾಗ ನೆನಪಲ್ಲಿ.

ಮರೆಯಲ್ಲೇ ನಿಲ್ಲದೆ, ನನ್ನನು ನಗಿಸಲು
ನನ್ನೆದುರಿಗೆ ನೀ ಬರುವೆಯಾ?
ನೆನಪಲ್ಲೇ ಉಳಿಯದೆ, ಕಣ್ಣೀರ ಅಳಿಸಲು
ಪ್ರೀತಿಯ ಆಸರೆ ಕೊಡುವೆಯಾ?

ಶುಕ್ರವಾರ, ನವೆಂಬರ್ 25, 2011

ಅಳು-ನಗು


ಅಳುವಿನ ಕೊನೆಯಲ್ಲಿ ಹುಚ್ಚು ನಗೆ ಇದೆ
ಹುಚ್ಚು ಹೆಚ್ಚಾಗಿದೆ ಎಂದು ಜನ ತಿಳಿದರೂ ಸರಿ
ಮನಸ್ಸು ಬಿಚ್ಚಿ ಜೋರಾಗಿ ನಕ್ಕು ಬಿಡಿ
ಆ ನಗುವಿನ ಅಲೆಯಲ್ಲಿ ಬೇಸರವು ಕೊಚ್ಚಿಹೋಗಲಿ.

ನಗುವಿನ ಅಂಚಿನಲ್ಲಿ ಕಣ್ಣು ತುಂಬುವ ಅಳುವಿದೆ
ಅದು ಮನವು ಸಂತಸವ ತೋರಿಸುವ ಪರಿ
ಮೂಡಿದ ಹನಿಗಳು ಹಾಗೆ ಇರಲಿ ಬಿಡಿ
ಆ ಹನಿಗಳ ಹೊಳಪಿನಲಿ ಮನವು ಹಗುರಾಗಲಿ.

ಬುಧವಾರ, ನವೆಂಬರ್ 23, 2011

ದೇವದಾಸ!!!


ನನ್ನ ನೋಡಿ ನೀ ನಕ್ಕಾಗ ನನ್ನೆದೆಯಲ್ಲಿ ಹಾಕಿದಂತಾಯಿತು ಮುನ್ನೂರು ಅಡಿ ಬೋರು,
ನಿನ್ನ ಮನದ ಊರಿನ ಒಳಗೆ ನನ್ನನ್ನು ಸೇರಿಸಬಾರದೇ ತಟ್ಟಲು ನಾನದರ ಡೋರು,
ಆ ಊರಿನ ರಸ್ತೆಗಳನ್ನು ಸಿಂಗರಿಸು, ಹೊರಡಲು ತಯಾರಾಗಿದೆ ನನ್ನ ಪ್ರೀತಿಯ ತೇರು,
ನನ್ನ ಪೂಜೆಗೆ ನೀ ಒಲಿದರೆ, ಸಂಭ್ರಮವು ಮೂಡಿ ಎಲ್ಲೆಲ್ಲೂ ಹಬ್ಬದ ಜೋರು,
ನಿನ್ನನು ನಾ ಪಡೆಯದ್ದಿದ್ದರೆ ನನ್ನಲ್ಲಿ ಬೇಸರವು ಪಸರಿಸಿ ಹರಿಯುವುದು ಕಣ್ಣೀರು,
ಆಗಿಬಿಡುವೆ ದೇವದಾಸ, ನೆನಪಾದರೆ ಹಿಂಬಾಲಿಸುವ ನಾಯಿ ಮನೆಯೇ ಬಾರು!!!

ಸೋಮವಾರ, ನವೆಂಬರ್ 21, 2011

ಅಕ್ಕಿಯಲ್ಲಿ ಕಲ್ಲು!!!


ಅಮ್ಮಳು ಅಕ್ಕಿ ಆರಿಸುವಾಗ ಕಂಡೆ ಅದರಲ್ಲೊಂದು ಸಣ್ಣ ಕಲ್ಲು,
ತಲೆಕೆಡಿಸಿಕೊಳ್ಳಲಿಲ್ಲ, ಊಟವ ನೆನೆದು ಮೂಡಿತ್ತು ಬಾಯಲ್ಲಿ ಜೊಲ್ಲು,
ಅನ್ನವು ಸಿದ್ಧ, ಗಬಗಬನೆ ತಿನ್ನತೊಡಗಿದಾಗ ಕಾಣಿಸಿತು ಮತ್ತದೇ ಕಲ್ಲು,
ತುಸುನಕ್ಕು, ತಟ್ಟೆಯ ಬದಿಗೆ ಸರಿಸುತ್ತ ಹೇಳಿದೆ ಅದಕ್ಕೆ ನೀನಲ್ಲೆ ನಿಲ್ಲು,
ತುತ್ತುಗಳು ಸೇರುತ್ತಿದ್ದವು, ಒಮ್ಮೆಲೆ ಕೇಳಿಸಿತು ಬಾಯಿಂದ ಕಟುಂ ಎಂಬ ಸೊಲ್ಲು,
ಕಲ್ಲಿರಬಹುದೆಂದು ತಿಳಿದು ಬಾಯನ್ನು ತೆರೆದು ನೋಡಲು ಉರುಳಿತ್ತು ನನ್ನ ಹಲ್ಲು!!!

ಸಮಸ್ಯೆಯು ಚಿಕ್ಕದಿರಬಹುದೆಂದು ತಿಳಿದು, ನಿಮ್ಮದಾಗಿದ್ದರೆ ನಿರ್ಲಕ್ಷಿಸುವ ಮತಿ
ಮುಂದೊಂದು ದಿನ ಚಿಕ್ಕ ಸಮಸ್ಯೆಯೂ ದೊಡ್ಡದಾಗಿ ನಿಮ್ಮ ಗತಿ ಅಧೋಗತಿ!!!

ಬುಧವಾರ, ನವೆಂಬರ್ 09, 2011

ಶಂಕರ್ ನಾಗ್


ಅದೆಷ್ಟೋ ಕಣ್ಗಳನು ತೆರೆಸುತ್ತ, ನೀವು ಮುಚ್ಚಿರಬಹುದು ನಿಮ್ಮ ಕಣ್ಗಳನು,
ನೀವು ತೆರೆಸಿದ ಆ ಕಣ್ಗಳು ಕಾಣುತ್ತಿವೆ ನಿಮ್ಮ ಕನಸುಗಳು ನನಸಾಗುವುದನು,
ಎಲ್ಲಾ ಕನ್ನಡಿಗರು ಕಾಣುವ ಕನಸೊಂದೇ ನೀವು ಪಡೆಯಬೇಕು ಮರು ಹುಟ್ಟನು,
ನಮ್ಮೆಲ್ಲರ ಅಭಿಮಾನಕೆ ತಲೆ ಬಾಗಿ ನಮ್ಮ ಬಳಿ ಬರಲು, ಮತ್ತೇಕೆ ತಡವಿನ್ನು!!!

ನೀವು ಎಲ್ಲೇ ಇದ್ದರೂ... ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಂಕರಣ್ಣ!!!

ಸೋಮವಾರ, ನವೆಂಬರ್ 07, 2011

ಆಲದ ಮರ


ದೂರದಿಂದ ನೋಡಿದೆ ಅಲ್ಲಿ, ನಿಂತಿದ್ದರು ನಾಲ್ವರು ಕುಳಿತಿದ್ದರು ಮಗದೊಬ್ಬರು,
ಆ ಮೂವರು ನಿಂತದ್ದು ಕಂಡಿತು ಅಶ್ವತ ಕಟ್ಟೆಯ ಮುಂದೆ ನಿಂತ ಭಕ್ತರ ಹಾಗೆ,
ಆಲದ ಮರದಂತಿದ್ದ ಕುಳಿತಿದ್ದವರ ಮಾತುಗಳ ಕೇಳುತ್ತ ಎಲ್ಲರು ಮಂತ್ರಮುಗ್ಧರು,
ಬಿಸಿಲಿನಿಂದ ಒಣಗಿದವಗೆ ನೆರಳು ಸಿಕ್ಕಂತಾಯಿತು ಅವರನ್ನು ನೋಡಿ ನನಗೆ.

ನಾನೂ ಅಲ್ಲಿಗೆ ಹೋಗಿ ಆ ಆಲದ ಮರಕ್ಕೆ ಭಕ್ತಿಯಿಂದ ಕೈ ಮುಗಿಯಬೇಕೆನಿಸಿತು,
ತಡಮಾಡಲಿಲ್ಲ ಒಂದು ಕ್ಷಣವು ಕೂಡ, ಹೋಗಿ ನಿಂತೆ ಆ ಪುಣ್ಯಾತ್ಮರ ಎದುರು,
ಮನದ ಮಾತಗಳನ್ನು ಪದಗಳಲಿ ಸೆರೆಹಿಡಿದ ಕೈ, ಕಾಲಿಗೆರಗಿದ ನನ್ನನು ಆಶೀರ್ವದಿಸಿತು,
ಆ ಕಣ್ಗಳಲಿ ಇನ್ನೂ ಬತ್ತದ ಉತ್ಸಾಹ, ಮಾತುಗಳಲ್ಲಿ ಕುಗ್ಗದ ಭಾವಗಳ ನವಿರು.

ಆ ಮರದಡಿಯಲ್ಲಿ ಯಾರೇ ನಿಂತರೂ ಮೂಡೂವುದು ಅವರಲ್ಲಿ ಕಾವ್ಯದ ಚಿಗುರು,
ಆಶಯವೊಂದೇ.. ಚಿರವಾಗಿರಲಿ ಆ ಮರವು, ಚಿರಂತನವಾಗಲಿ ಅದರ ಕೃತಿಗಳೆಂಬ ಬೇರು!!!

ನಿತ್ಯೋತ್ಸವದ ಮಹಾನ್ ಕವಿ ನಿಸಾರ್ ಅಹ್ಮದ್ ಅವರನ್ನು ಭೇಟಿ ಮಾಡಿದ ಸಂದರ್ಭ :)

ಶನಿವಾರ, ನವೆಂಬರ್ 05, 2011

ಪಂಚಭೂತಗಳು


ಸಿಂದೂರದಿಂದ ಸಿಂಗರಿಸಿಕೊಂಡ ನಿನ್ನ ಹಣೆಯು ಆಗಸದ ಹಾಗೆ,
ಆ ನಿನ್ನ ಕಣ್ಗಳ ನೋಟವು ಹಚ್ಚಿದ ಬೆಂಕಿಗೆ ನಾ ಕರಗಿ ಹೋದೆ,
ತೇಲಿದೆ ನಾ ಕಿವಿಗಳಲಿ ನೀ ಪಿಸುಗುಟ್ಟಿದ ಮಾತುಗಳ ಬಿಸಿಗಾಳಿಗೆ,
ಝರಿಯಂತೆ ಇಳಿದಿರುವ ಮುಂಗುರುಳಲ್ಲಿ ನಾನಾಡಿದೆ ಪದೆ ಪದೆ,
ನನ್ನ ಮುತ್ತುಗಳ ಮಳೆಯ ಸುರಿಸುವೆ ನಿನ್ನ ಕೆನ್ನೆಯೆಂಬ ಧರಣಿಗೆ,
ಮೊಗದ ಅಕೃತಿಯಲ್ಲಿ ಪಂಚಭೂತಗಳಿರುವ ಸುಂದರ ಪ್ರಕೃತಿ ನಿನ್ನದೆ.
ತೋರಿಸಲು ಮಗದೊಮ್ಮೆ ನಿನ್ನ ಚೆಲುವ, ನಾನದರಲ್ಲಿಯೇ ತಲ್ಲೀನ,
ಇಲ್ಲದಿದ್ದರೆ ಸತ್ತ ನನ್ನ ಆಸೆಗಳೆಲ್ಲವೂ ಪಂಚಭೂತಗಳಲ್ಲಿ ಲೀನ!!!

ಮಂಗಳವಾರ, ನವೆಂಬರ್ 01, 2011

ಹೆಮ್ಮೆಯ ಕನ್ನಡಿಗರು ನಾವು!!!


ಪ್ರೀತಿಯ ಕನ್ನಡಿಗರು ನಾವು ಕನ್ನಡಿಗರೆಂಬ ಹೆಮ್ಮೆ ನಮಗಿರಲಿ,
ಕನ್ನಡವನ್ನು ಬೆಳೆಸೋಣ, ನಮ್ಮೆಲ್ಲರಲ್ಲಿ ಕನ್ನಡವು ಸದಾ ನಲಿದಾಡಲಿ.

ಕನ್ನಡದ ನೆಲದಿ ತಲೆಯೆತ್ತಿ ಬೀಗಿ ನಡೆದರು ಅದೆಷ್ಟೊ ವೀರರು,
ಈ ಮಣ್ಣಿನ ಸೊಗಡನ್ನು ಅನಾವರಣಗೊಳಿಸಿದರು ಈ ನಾಡಿನ ಕವಿವರ್ಯರು.

ಕನ್ನಡದಲ್ಲಿ ಒಂದು ಪದವನ್ನಾಡಿದರೂ ಅದು ಸುಮಧುರ ಸ್ವರದಂತೆ,
ಈ ನೆಲದಿ ಜನ್ಮ ಪಡೆದಿರುವುದು, ನಮಗೆ ಆ ದೇವರು ಕೊಟ್ಟಿರುವ ವರವಂತೆ!

ಕನ್ನಡ ರಾಜ್ಯೋತ್ಸವವೆಂಬುದು ಆಗದಿರಲಿ ಒಂದು ದಿನದ ಸಡಗರವಾಗಿ,
ಕನ್ನಡವಾಗಲಿ ಚಿರಂತನ, ಹಾರುತಿರಲಿ ಕನ್ನಡದ ಬಾವುಟ ನಿರಂತರವಾಗಿ.

ಎಲ್ಲರಿಗು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಜೈ ಕರ್ನಾಟಕ ಮಾತೆ!!!

ಭಾನುವಾರ, ಅಕ್ಟೋಬರ್ 30, 2011

ಹೆಸರೇಕೆ???


ಒಬ್ಬೊಬ್ಬರು ಒಂದೊಂದು ಜಾತಿಯ ಹೆಸರನು ಅವನಿಗಿಟ್ಟರು ಯಾರನ್ನೂ ಕೇಳದೆ,
ಆ ಕಲ್ಲಿಗೇಕೆ ಜಾತಿಯ ಹೆಸರು, ಭಕ್ತಿಯಿಂದ ಕೈಮುಗಿದರೆ ಸಾಲದೆ ಎಂದು ನಾ ಕೇಳಿದೆ,
ಹೇಳಿದರವರು, ಅದು ಹೇಗೆ ಆದೀತು? ಅವ ನಮ್ಮವ, ಅವನ ಮೇಲೆ ನಮಗೆ ಹಕ್ಕಿದೆ,
ನಿಮ್ಮ ಹಕ್ಕು ಸಾಧಿಸಲು ಅವನು ಮನೆ ಮಗನಲ್ಲ, ಸರ್ವವ್ಯಾಪಿ ಅವನೆಂದು ಹೇಳಿದೆ.

ನಾ ಹೇಳಿದನ್ನು ಕೇಳುವವರಿರಲಿಲ್ಲ, ಅವರೆಲ್ಲರು ಜಾತಿಯ ಮಂಕು ಕವಿದಿರುವ ಮೂಡರು,
ಜಾತಿಯೆಂಬ ಬೇತಾಳನನ್ನು ಸದಾ ಹೆಗಲ ಮೇಲೆ ಕೂರಿಸಿಕೊಂಡಿರುವ ಕಲಿಯುಗದ ವಿಕ್ರಮರು,
ಯಾರು ಏನೇ ಹೇಳಿದರೂ, ಆ ದೇವರು ತಮ್ಮ ಜಾತಿಯವನೆಂದು ಹೆಮ್ಮೆಯಿಂದ ನುಡಿದರು,
ಇಷ್ಟಾದರೂ, ಏನೂ ಕೇಳದಂತೆ, ಏನೂ ನಡೆಯದಂತೆ ಮುಗುಳ್ನಗುತ್ತ ಕಲ್ಲಾಗಿ ನಿಂತಿಹನು ಆ ದೇವರು!!!

ಶುಕ್ರವಾರ, ಅಕ್ಟೋಬರ್ 28, 2011

ಖಾಲಿ


ಈಗಷ್ಟೇ ಮುಗಿದಿದೆ ರಂಗು - ರಂಗಿನ ದೀಪವಳಿ,
ಎಲ್ಲೆಡೆ ಬೆಳಕಿದ್ದರೂ ನನ್ನೊಳಗೆ ಮಾತ್ರ ಖಾಲಿ ಖಾಲಿ.

ನೆಂಟರಿಷ್ಟರೆಲ್ಲಾ ಸೇರಿ ಮನೆಯನ್ನು ಆವರಿಸಿತ್ತು ಹಬ್ಬದ ಸಡಗರ,
ಹೀಗಿದ್ದರೂ ನಾನಾಗಿದ್ದೆ ಒಂಟಿ, ಮೂಡಿತ್ತು ಮನದಲ್ಲಿ ಬೇಸರ.

ಸಿಹಿಯಾಗಿರಲಿಲ್ಲ ಕಜ್ಜಾಯ, ಯೋಚಿಸಿದೆ ಏನೆಂದು ಕಾರಣ,
ತಿಳಿಯಿತು ನೀನಿರಲಿಲ್ಲವೆಂದು ಅದಕ್ಕೆ ತಪ್ಪಿತು ಪ್ರೀತಿಯ ಹೂರಣ.

ಸದ್ದು ಮಾಡುವ ಪಟಾಕಿಗಳಿಂದ ತುಂಬಿತ್ತ ನನ್ನ ಹೊರಗಿನ ಆವರಣ,
ಸದ್ದಿದ್ದರೂ ನನ್ನೊಳಗಿತ್ತು ಮೌನ, ನನ್ನೆದೆಯ ಆವರಣವು ಭಣ - ಭಣ.

ನೀ ನನ್ನ ಜೊತೆಯಲ್ಲಿದ್ದರೆ, ನನಗೆ ಪ್ರತಿ ದಿನವೂ ಬೆಳಗುವ ದೀಪಾವಳಿ,
ಹೋಗಲಾಡಿಸಿ ನನ್ನ ದುಃಖವ, ತೊಡಿಸು ಬಾ ಮನಕೆ ನಿನ್ನ ಪ್ರೀತಿಯ ಪ್ರಭಾವಳಿ.

ಮಂಗಳವಾರ, ಅಕ್ಟೋಬರ್ 25, 2011

ದೀಪಾವಳಿ


ಜಡ ಮನದ ಮೂಲೆಯ ಸೇರದಿರು ಓ ಮನುಜ,
ನಿನ್ನ ಪ್ರಪಂಚದಿಂ ಹೊರ ಬಂದು ನೋಡು ಬೆಳಕು ತುಂಬಿದ ಪ್ರಕೃತಿಯ.
ಕತ್ತಲ ಹಾದಿಯಲ್ಲಿ ನಡೆದು ಮನಸ್ಸು ಕೊಳೆಯುವುದು ಸಹಜ,
ಪ್ರೀತಿಯ ಬೆಳಕಿನಿಂದ ಎಲ್ಲೆಲ್ಲೂ ಮೂಡಿಸು ಸಹಬಾಳ್ವೆಯ ಸುಕೃತಿಯ.

ಆಶಿಸೋಣ ಕರಗಲೆಂದು ಎಲ್ಲರಲ್ಲಿರುವ ಅಂಧಕಾರದ ಕಾರ್ಮೋಡ,
ಕರಗಿ ಬೆಳಕಿನ ಮಳೆಯಾಗಿ ತೋಳೆದುಬಿಡಲಿ ಕೊಳಕು ತುಂಬಿದ ಬುದ್ಧಿಯನು.
ಆಚರಿಸೋಣ ದೀಪಾವಳಿಯ ಸದಾ ಗುನುಗುತ್ತ ಸಂತಸ-ಸಂಭ್ರಮಗಳ ಹಾಡ,
ದೀಪಗಳ ಹಾವಳಿಯು ತೊಲಗಿಸಿ ಕತ್ತಲನು ನೀಡಲಿ ಎಲ್ಲರಿಗು ಮನದ ಶುದ್ಧಿಯನು.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

ಶನಿವಾರ, ಅಕ್ಟೋಬರ್ 22, 2011

ಗಣಿತ


ಶೂನ್ಯದಿಂದ ಉದಯಿಸುವುದು ಹೊಸತೊಂದು ಜೀವ, ಎರಡು ಜೀವಗಳು ಕೂಡುತ್ತ,
ಹೊಸ ಜೀವವು ಬೆಳೆಯುತ ಸಾಗುವುದು ಬಾಳಿನ ದಾರಿಯಲಿ ತನ್ನ ಆಸೆಗಳನ್ನು ಗುಣಿಸುತ್ತ,
ಆಸೆಗಳ ಜಂಜಾಟದಲ್ಲಿ ಎಲ್ಲರಿಂದಲೂ ದೂರ ತನ್ನೆಲ್ಲಾ ಸಂಬಂಧಗಳನ್ನು ಭಾಗಿಸುತ್ತ,
ಬಾಳಿನ ಕೊನೆಯ ಶೂನ್ಯದ ಮೂಲೆಯನ್ನು ಸೇರವುದು ಇರುವುದೆಲ್ಲವನ್ನೂ ಕಳೆಯುತ್ತ.
ಎಲ್ಲರಲ್ಲೂ ಈ ಲೆಕ್ಕಾಚಾರದ ಬದುಕು ಸಾಮಾನ್ಯ ಶೂನ್ಯದ ದಡಗಳು ಮಧ್ಯೆ ಸಾಗುತ್ತ,
ಈ ಲೆಕ್ಕದ ಮರ್ಮವ ಅರಿತು, ಒಳ್ಳೆಯ ಕರ್ಮವ ಮಾಡಿದರೆ ಸುಂದರ ಬಾಳೆಂಬ ಗಣಿತ!!!

ಬುಧವಾರ, ಅಕ್ಟೋಬರ್ 19, 2011

ಪೆದ್ದ


ನಾನೊಬ್ಬ ಏನೂ ಅರಿಯದ ಪೆದ್ದನೆಂದು ನೀವೆಲ್ಲ ತಿಳಿದಿರಿ,
ನನ್ನಂತ ದಡ್ಡ ಸಿಗುವುದಿಲ್ಲ ಎಂದು ಕೇಕೆ ಹಾಕಿ ನಕ್ಕಿರಿ.

ಎಲ್ಲರು ನಗಬೇಕೆಂದರೆ ನಾನು ಪೆದ್ದನೇ ಸರಿ ಎಂದು ಸುಮ್ಮನಿದ್ದೆ,
ಆದರೆ ನನ್ನೊಳಗಿದ್ದ ಅಂತರಾತ್ಮನಿಗೆ ಬರಲಿಲ್ಲ ಆ ಕ್ಷಣದಿಂದ ನಿದ್ದೆ.

ಹೋಗಲಿ ಬಿಡು ನಮಗ್ಯಾಕೆ ನಗುವವರ ಗೊಡವೆ ಎಂದು ನಾನವನಿಗೆ ಹೇಳಲು,
ಅದಕ್ಕವನೆಂದ, ಅವರು ಯಾರು ನೀ ಪೆದ್ದನೆಂದು ನಿನ್ನ ಬುದ್ದಿಶಕ್ತಿಯ ಅಳಿಯಲು?

ನಗುವವರಿಗೆ ಬುದ್ದಿ ಕಲಿಸುವೆನೆಂದು ನನ್ನ ಅಂತರಾತ್ಮನು ನನಗೆ ಮಾತು ಕೊಟ್ಟ,
ನನ್ನ ಕೆಚ್ಚೆದೆಯನ್ನು ಬಡಿದೆಬ್ಬಿಸಿ, ನನ್ನೊಳಗೆ ಆತ್ಮವಿಶ್ವಾಸದ ಕಿಡಿಯನ್ನು ಹತ್ತಿಸಿಬಿಟ್ಟ.

ನನ್ನ ನಾ ನಿರೂಪಿಸಿಕೊಳ್ಳುವವರೆಗು ನನ್ನ ಮಾತುಗಳಿಗೆ ನಾ ಸದಾ ಬದ್ಧ,
ನನ್ನ ನೋಡಿ ನಗುವವರಿಗಿಂತಲೂ ನನ್ನದು ಒಂದು ಕೈ ಮೇಲೆಂದು ತೋರಿಸುವೆ...ನಾನಲ್ಲ ಪೆದ್ದ!!!

ಶನಿವಾರ, ಅಕ್ಟೋಬರ್ 15, 2011

ತಪಸ್ಸು!!!



ಹೇಳಿದೆ ನನ್ನ ಸುತ್ತುಮುತ್ತಲಿನ ಜನಕ್ಕೆ, ಮಾಡಬೇಕೆಂದಿರುವೆ ನಾನು ಒಂದು ತಪಸ್ಸು,
ಅವರು: ನೀನಿನ್ನು ಚಿಕ್ಕ ಹುಡುಗ, ತಪಸ್ಸಿಗೆ ಇನ್ನೂ ಇದೆ ವಯಸ್ಸು.
ನಾನು: ವಯಸ್ಸಿನ ಪರಿವೇಕೆ ಕಾಣಲು ಪ್ರೀತಿಯ ಕನಸ್ಸು???
ಅವರು: ಈ ಕನಸ್ಸುಗಳು ಸಾಮನ್ಯ, ಏಕೆಂದರೆ ನಿನ್ನದು ಹುಚ್ಚು ಮನಸ್ಸು.
ನಾನು: ಆ ಹುಚ್ಚು ಮನಸ್ಸಿನಿಂದಲೇ, ಮಾಡಿ ತೀರುವೆ ಇದನ್ನು ನನಸ್ಸು.
ಅವರು: ಇದು ನನಸ್ಸಾದರೆ, ನಿನ್ನ ಮೇಲೆ ಉಂಟಾಗುತ್ತದೆ ಎಲ್ಲರ ಮುನಿಸು.
ನನ್ನ ಉತ್ತರ...
ಮುನಿಸಾದರೂ ಸರಿಯೆ, ಮಾಡಬೇಕೆಂದಿರುವೆ ನಾನು ಪ್ರೀತಿಯ ತಪಸ್ಸು!!!

ಶುಕ್ರವಾರ, ಅಕ್ಟೋಬರ್ 07, 2011

ನಿಜ


ತಾಯಿಯ ಗರ್ಭದಿಂದ ಹುಟ್ಟು ಪಡೆಯುವುದಾದರೆ ನಿಜ,
ಕೊನೆಗೆ, ಭೂ ಮಾತೆಯ ಒಡಲ ಸೇರುವುದು ಅಷ್ಟೇ ಸಹಜ||

ಕೆಲವರೆನ್ನುವರು ಜೀವನವೆಂಬುದು ನಾಲ್ಕು ದಿನಗಳ ಜಂಜಾಟ,
ಆದರೆ ನನಗನಿಸುತ್ತದೆ ಇದು ನೋವು-ನಲಿವುಗಳ ಕಣ್ಣಾ-ಮುಚ್ಚಾಲೆ ಆಟ||

ಬಲ್ಲಿದನಾಗಿದ್ದರೆ ಬಡವರಿಗೆ ಸಹಾಯ ಹಸ್ತವ ನೀಡು,
ಇಲ್ಲದಿದ್ದರೆ ಯಾರ ಹಂಗಿಲ್ಲದೆ ಮೇಲೇಳುವ ದಾರಿಯ ನೀ ನೋಡು||

ಸುಖವೇ ಆಗಲಿ ದುಃಖವೇ ಆಗಲಿ ಇಲ್ಲುಂಟು ಕೊನೆ,
ಪಯಣ ಮುಗಿದ ಮೇಲೆ ಎಲ್ಲರಿಗೂ ದಕ್ಕುವುದು ಅದೇ ಮಣ್ಣಿನರಮನೆ!!!

ಹೀಗಿರುವಾಗ, ಎಲ್ಲದಕ್ಕೂ ಕೊನೆಯೊಂದಿದೆ ಎಂದು ನೀ ತಿಳಿದರೆ,
ಸಂತಸ, ನೆಮ್ಮದಿಗಳಿಂದ ಕೂಡಿ ಕಂಗೊಳಿಸುತ್ತದೆ ನಮ್ಮೀ ಧರೆ||

ಸರ್ವೇ ಜನಃ ಸುಖಿನೋ ಭವಂತು...

ಬುಧವಾರ, ಅಕ್ಟೋಬರ್ 05, 2011

ಮಹಿಷಾಸುರ ಮರ್ದಿನಿ!!!


ನೀನಂದು ಆ ಮಹಿಷಾಸುರನ ಕೊಂದು ಲೋಕದಲ್ಲಿ ಶಾಂತಿಯ ನೆಲಸಿದೆ,
ಅಂತೆಯೇ, ನಮ್ಮಲ್ಲಿ ಅಡಗಿರುವ ರಕ್ಕಸನನ್ನು ನೀನಿಂದು ಹೊರಗೆಳೆದು ಕೊಲ್ಲಬೇಕಿದೆ||

ದುಷ್ಟ ಶಕ್ತಿಗಳ ನಿಗ್ರಹಿಸಿ ಶಿಷ್ಟರನ್ನು ಉಳಿಸುವ ನೀನು ಮಹಾಮಾಯೆ,
ನಾವೆಲ್ಲರೂ ನಿನ್ನ ಮಕ್ಕಳಲ್ಲವೆ, ತಪ್ಪಾಗಿದ್ದರೆ ಕ್ಷಮಿಸಿ ಕಾಪಾಡು ಓ ತಾಯೆ||

ನಿನ್ನ ಕೃಪಾಕಟಾಕ್ಷ ನಮ್ಮ ಮೇಲಿದ್ದರೆ, ಸಾರ್ಥಕ ನಮ್ಮ ಭಕ್ತಿಯ ಪರಿ,
ನಮ್ಮಲ್ಲಿ ಸುಖ-ನೆಮ್ಮದಿ ಸದಾ ನೆಲಸುವಂತೆ ಮಾಡು, ಕರುನಾಡ ಚಾಮುಂಡೇಶ್ವರಿ||

ಮಂಗಳವಾರ, ಅಕ್ಟೋಬರ್ 04, 2011

ಕಲ್ಪವೃಕ್ಷ


ನೀ ನನ್ನ ಮನದ ಕಲ್ಪವೃಕ್ಷ...

ನಿನ್ನ ಜೊತೆ ಕಳೆದ ಕ್ಷಣಗಳೆಲ್ಲವೂ ಎಲೆಗಳಂತೆ,
ಉರುಳಿದರೂ, ಮತ್ತಲ್ಲಿ ಮೂಡುವುದು ಹೊಸ ಕ್ಷಣಗಳ ಚಿಗುರು||

ನಿನ್ನ ನೆನಪುಗಳೆಲ್ಲವೂ ರುಚಿಸುವ ಹಣ್ಣುಗಳಂತೆ,
ಮತ್ತೆ ಮತ್ತೆ ಬೇಕೆನಿಸುವುದು, ಎಷ್ಟು ಬಾರಿ ಸವಿದರೂ||

ನಿನ್ನ ಮಾತುಗಳೆಲ್ಲವೂ ಆಳಕೆ ಇಳಿದ ಬೇರುಗಳಂತೆ,
ಆ ಬೇರಿಗೆ ವಿಶ್ವಾಸವಾದರೆ ಮಣ್ಣು, ನಂಬಿಕೆಯೇ ನೀರು||

ನಿನ್ನ ಒಲವೆಂಬುದು ಕಂಗೊಳಿಸುವ ಪಚ್ಚೆ ಹಸಿರಿನಂತೆ,
ಈ ನನ್ನೆದೆಯ ಲೋಕಕೆ ನಿನ್ನ ಒಲವೇ ಉಸಿರು||

ಹೀಗ ಹೇಳು, ನೀನೇ ಅಲ್ಲವೆ ನನ್ನೀ ಮನದ ಕಲ್ಪವೃಕ್ಷ...

ಬುಧವಾರ, ಸೆಪ್ಟೆಂಬರ್ 28, 2011

ಬೆಳದಿಂಗಳು


ನಿನ್ನ ಮೊಗದಲ್ಲಿ ನಗುವಿಲ್ಲದಿರಲು, ನನ್ನ ಮನದಲ್ಲಿ ಅಮಾವಾಸೆಯ ಕತ್ತಲು,
ನಗು ಅರಳಲು, ಮನದಿ ಚೆಲ್ಲಿದ ಬೆಳದಿಂಗಳಲ್ಲಿ ನನ್ನ ಆಸೆಗಳೆಲ್ಲವೂ ಬೆತ್ತಲು||
ಕಂಗಾಲಾಗಿದ್ದ ನನ್ನ ಒಂಟಿ ಹೃದಯಕೆ ಆ ನಿನ್ನ ಕುಡಿ ನೋಟವು ಮುತ್ತಲು,
ಆ ಮುತ್ತಿನ ಮತ್ತಿಗೆ ಮರೆತೇ ಬಿಟ್ಟೆ ನಾ, ನನ್ನ ಸುತ್ತ-ಮುತ್ತಲು!!!

ಗುರುವಾರ, ಸೆಪ್ಟೆಂಬರ್ 22, 2011

ಶುಭೋದಯ


ಮನೆಯ ಅಂಗಳದಲ್ಲಿ ನೀರ ಮುತ್ತುಗಳು ಹರಡಿದ್ದವು,
ಆಗಸದಿ ಚಿಲಿಪಿಲಿ ಹಕ್ಕಿಗಳ ಸಾಲು ಹೊರಡಿದ್ದವು,
ಗಿಡ ಮರಗಳು ಬೆಳಕಿನ ಹೊದಿಕೆಯ ಹೊದ್ದಿದ್ದವು,
ಜಾನುವಾರುಗಳು ಚಿನ್ನದ ಕಿರಣಗಳಿಗೆ ಮೈ ಒಡ್ಡಿದ್ದವು,
ಮೂಡಣದಿಂದ ಸೂರ್ಯನ ರಶ್ಮಿಗಳು ಭೂಮಿಯ ತಲುಪಿದ್ದವು,
ಅಗೋ, ಹೊಸ ಚೈತನ್ಯದ ಹೊಸ ದಿನದ ಹೊಸ ಕ್ಷಣಗಳು ಶುರುವಾಗಿದ್ದವು!!!

ಮಂಗಳವಾರ, ಸೆಪ್ಟೆಂಬರ್ 20, 2011

ಅಮಲು



ನನ್ನನ್ನು ಕೆರಳಿಸಿತು ನೀ ನನಗೆ ಮೊದಲು ಕೊಟ್ಟ ಮುತ್ತಗಳ ಅಮಲು,
ಧೂಳೆದ್ದಿದ ನನ್ನ ಹೃದಯದಿ ಬರೀ ನಿನ್ನ ಪ್ರೀತಿಯದೇ ಘಮಲು||

ನೀ ನನ್ನ ಬಿಗಿದಪ್ಪಿನಂದಿನಿಂದ ನನ್ನಲ್ಲಿ ಮೂಡಿತು ಬಸಿರಿನ ಬಯಕೆ,
ನನ್ನ ಉಸಿರು, ಒಡಲ ಹಸಿರು ಎಲ್ಲವೂ ನೀ ಕೊಟ್ಟ ಪ್ರೀತಿಯ ಕಾಣಿಕೆ||

ಸದಾ ಹೀಗೇ ಸುರಿಯಬಾರದೇ ನಲ್ಲ!!!

"ಭೂಮಿ"ಯು "ಮಳೆರಾಯ"ನಿಗೆ ಈ ರೀತಿ ಹೇಳಬಹುದೇನೋ...

ಬುಧವಾರ, ಸೆಪ್ಟೆಂಬರ್ 14, 2011

ಕಂಬನಿ


ನೀ ನನ್ನ ಬಳಿ ಇರುವಾಗ ನನ್ನೆದೆಯಲ್ಲಿ ಹುಟ್ಟಿತು ಪ್ರೇಮವಾಹಿನಿ,
ನೀನಿಲ್ಲದಿದ್ದಾಗ ಹರಿಯುತ ಮೂಡಿಸಿತು ನನ್ನ ಕಣ್ಗಳಲಿ ಕಂಬನಿ||

ವಾಹಿನಿ ಹರಿದರೂ, ಕಂಬನಿ ಸುರಿದರೂ ನೀನೇ ನನ್ನ ಮಾನಿನಿ,
ಪ್ರೀತಿ ಅಮೃತವ ನೀಡಿ ನನ್ನ ಉಳಿಸು ಬಾ, ಬಾಳ ಸಂಜೀವಿನಿ||

ಶನಿವಾರ, ಸೆಪ್ಟೆಂಬರ್ 10, 2011

ಸಾಕು


ಅವನು:
ಚೆಲುವೆ,
ಕತ್ತಲೆಯ ಆಗಸದಲಿ ಚಂದಿರನು ಬೆಳಗಲು ಸೂರ್ಯನ ಬೆಳಕು ಬೇಕು,
ಅಂತೆಯೇ, ನನ್ನ ಬರಿದಾದ ಮನದಲಿ ಪ್ರೀತಿ ಅರಳಲು ನಿನ್ನ ನಗುವೊಂದು ಸಾಕು||

ಅವಳು:
ಚೆಲುವ,
ಕತ್ತಲೆಯ ಆಗಸದಲಿ ಚಂದಿರನು ಬೆಳಗಲು ಸೂರ್ಯನ ಬೆಳಕು ಬೇಕು.
ಆದರೆ, ನನ್ನ ಬರಿದಾದ "ಪರ್ಸ್" ತುಂಬಲು ನಿನ್ನ ಬಳಿ ದುಡ್ಡಿದ್ದರೆ ಸಾಕು!!!

ಗುರುವಾರ, ಸೆಪ್ಟೆಂಬರ್ 08, 2011

ಯಾರು???



ದಿಲ್ಲಿಯ ಜನ ಆಗ ತಾನೆ ತೆರೆಯಲು ಇದ್ದರು ತಮ್ಮ ದಿನಚರಿಯ ಪುಟ,
ಯಾರೂ ಊಹಿಸದೆ, ಯಾರೂ ಭಾವಿಸದೆ ಬಂದೆರಗಿತು ಬಾಂಬ್ ಸ್ಪೋಟ.

ಕೆಲವರದ್ದು ಮೌನವಾದರೆ, ಇನ್ನೂ ಕೆಲವರದ್ದು ಮುಗಿಲು ಮುಟ್ಟಿದ ಕಂಬನಿ,
ರಕ್ತದ ಹೊಳೆ ಹರಿದಲ್ಲಿ ಕಂಡಿದ್ದು ಕೆಂಪು ಸೂರ್ಯ, ಚೀರುವ ದನಿ.

ಜೀವ ಉಳಿದವರ ಕಣ್ಣುಗಳಲ್ಲಿ ಹೆಚ್ಚಾಗಿ ಮೂಡಿರಲು ಬದುಕುವ ಕನಸು,
ಕಣ್ಣು ಮುಚ್ಚಿದವರ ಪ್ರೀತಿಪಾತ್ರರಿಗೆ ಬದುಕು ನಡೆಸಲು ಎಲ್ಲಿಯ ಮನಸು.

ಮರುದಿನವೆ ಏನೂ ನಡೆದಂತೆ ಎಲ್ಲರೂ ತಮ್ಮ ಜೀವನದಲ್ಲಿ ಮಗ್ನರಾಗುವರು ,
ಹೀಗಾದರೆ ಎಗಿಲ್ಲದೆ ಸಾಗಿರುವೆ ಈ ಸಾವು-ನೋವಿಗೆ ಉತ್ತರ ಹೆಳುವವರು ಯಾರು???

ಮಂಗಳವಾರ, ಸೆಪ್ಟೆಂಬರ್ 06, 2011

ಭೂತ


ನಿನ್ನ ನೆನಪೆಂಬುದು ಈಗ ಕಾಡುವ ಭೂತ,
ಭೂತವೆಂಬುದಿಲ್ಲಿ ಕಾಲದ ಲೀಲೆಯೋ ಇಲ್ಲ ಕಾಣದಕೃತಿಯ ಸೆಲೆಯೋ?
ನಿನ್ನ ಜೊತೆ ಕಳೆದ ಕ್ಷಣಗಳೆಲ್ಲವೂ ಈಗ ಗತ,
ಗತವೆಂಬುದಿಲ್ಲಿ ಅಳಿಸಲಾಗದ ಕಲೆಯೋ ಇಲ್ಲ ಬಿಡಿಸಲಾಗದ ಬಲೆಯೋ?
ನಾ ಅರಿಯೆ!!!

ಬುಧವಾರ, ಆಗಸ್ಟ್ 31, 2011

ವಿನಾಯಕ


ನಮ್ಮ ಬಾಳಿನ ಪಥದಲ್ಲಿ ನಿನ್ನ ಕರುಣೆಯ ರಸವ ಹರಿಸು,
ನಿನ್ನ ಈ ಮಕ್ಕಳಿಗೆ ವಿಘ್ನಗಳು ಬಾರದಿರಲೆಂದು ಹರಸು||
ಹೇ ಗಜಮುಖ, ನಿನ್ನ ಕೃಪಾಕಟಾಕ್ಷದಿಂದ ನಮ್ಮ ಜೀವನ ಸುಮಧುರ,
ಕಷ್ಟಗಳನ್ನು ನಿವಾರಿಸುವ ನಿನಗೆ ನಿನ್ನೆಲ್ಲ ಭಕ್ತರಿಂದ, ಇಗೋ ಭಕ್ತಿಯ ಜೈಕಾರ||

ಎಲ್ಲರಿಗೂ ಗೌರಿ-ಗಣೇಶ ಶುಭಾಶಯಗಳು!!!

ಮಂಗಳವಾರ, ಆಗಸ್ಟ್ 30, 2011

ಬೆಳ್ಳಿ ರೇಖೆ


ನೆನಪುಗಳೆಂಬ ಕಾರ್ಮೋಡಗಳ ಅಂಚಿಗೆ ನನ್ನವಳ ನಗುವೇ ಬೆಳ್ಳಿ ರೇಖೆ
ನೆನಪುಗಳು ದಟ್ಟವಾಗಿ ಕಣ್ಣೀರು ಸುರಿಯಲು, ಕಾಮನಬಿಲ್ಲು ಮೂಡಿಸುವ ಕಿರಣ ನನ್ನಾಕೆ||

ಸೋಮವಾರ, ಆಗಸ್ಟ್ 15, 2011

ಸ್ವಾತಂತ್ರ್ಯ


ಸ್ವಾತಂತ್ರ್ಯದ ಮುನ್ನ ನಮ್ಮ ಹಿರಿಯರು ಸ್ವಾತಂತ್ರ್ಯದ ಮಂತ್ರವ ನುಡಿದರು,
ಸ್ವಾತಂತ್ರ್ಯದ ನಂತರ ನಮ್ಮ ಸೈನಿಕರು ಸ್ವಾತಂತ್ರವ ಉಳಿಸಲು ಮಡಿದರು||

ನಾವು ಇವರುಗಳಾಗದಿದ್ದರೂ, ಇವರನ್ನು ಸದಾ ನೆನೆಯೋಣ ತನು ಮನಗಳಲಿ,
ನಮ್ಮ ಭಾರತ ಮಾತೆಯ, ಇವಳ ಕೀರ್ತಿಯು ಎಂದೆಂದಿಗೂ ಉಳಿಯಲಿ, ಚಿರವಾಗಲಿ||

ಎಲ್ಲರಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು


ಗುರುವಾರ, ಆಗಸ್ಟ್ 11, 2011

ಸ್ಪೋಟ


ಪ್ರೀತಿ ಹೆಚ್ಚಾಗಿ ಸ್ಪೋಟಿಸುವವರು "ಪ್ರೇಮಿಗಳು".
ಆದರೆ, ಸ್ಪೋಟಗಳನ್ನೇ ಪ್ರೀತಿಸುವವರು "ಉಗ್ರಗಾಮಿಗಳು"!!!

ಶನಿವಾರ, ಆಗಸ್ಟ್ 06, 2011

ಸ್ನೇಹ


ನೆನಪಿನ ತುಂತುರು ಹನಿಗಳಲ್ಲಿ,
ಜೀವನದ ಎಳೆ ಎಳೆಗಳಲ್ಲಿ.
ತೋಚದೆ ಎನು ಮಾಡುವುದೆಂದು,
ಆಗಿದ್ದೆ ಒಂಟಿ ನಾನಿಲ್ಲಿ||

ಆಗ ನೀ ಬಂದು ನನ್ನ ಬಳಿಯಲಿ,
ಸ್ನೇಹವೆಂಬ ಸಸಿಯ ನೆಟ್ಟಿದೆ ನನ್ನೆದೆಯಲಿ.
ಏನು ಹೇಳಬೇಕು ತಿಳಿಯಿತು ನನಗಿಂದು,
ಮನಸಿನ ಬರಡು ಆವರಣದಲ್ಲಿ ನಿನ್ನ ಸ್ನೇಹವೇ ರಂಗೋಲಿ||

ಶನಿವಾರ, ಜುಲೈ 30, 2011

ಜಗ್ಗಾಟ


ನಮ್ಮ ರಾಜ್ಯದ ಸಿ.ಎಂಗೆ ಮೇಲಿಂದ- ಮೇಲೆ ಸತ್ವ ಪರೀಕ್ಷೆಗಳು ಯಾಕೆ?
ಏಕೆಂದರೆ ಸದಾ ಕಾಲೆಳೆಯುತ್ತಾ ಇರುತ್ತಾರೆ ಸದ್ಯಕ್ಕೆ ಕೆಲಸವಿಲ್ಲದ ಎಚ್.ಡಿ.ಕೆ.
ಬಹುಶಃ, ಇವರಿಗೆ ಈ ನಡುವೆ ಸೆರಗೆಳೆಯಲು ಬಿಡುತಿಲ್ಲವೇನೊ "ರಾಧಿಕೆ"||

ಏನೇ ಆದರೂ ತಲೆ ಉರುಳಿದರೂ ಬಲು ಭಂಡ ಕಣ್ರಿ ನಮ್ಮ ರಾಜ್ಯದ ಸಿ.ಎಂ
ಇನ್ನೂ ನಡೆಸುತ್ತಲೇ ಇದ್ದಾರೆ ಕಸರತ್ತು, ಆಗಿಸಲು ತಮ್ಮ ಸಿ.ಎಂ ಹುದ್ದೆ ಖಾಯಂ
ಒಂದು ವೇಳೆ ಅದಾಗದ್ದಿದ್ದರೆ, ಆಗಬೇಕಂತೆ "ಡೆಪ್ಯುಟಿ ಸಿ.ಎಂ", ಶೋಭಾ ಮ್ಯಾಡಂ||

ಸದ್ಯಕ್ಕೆ ನಿಲ್ಲುವಂತಿಲ್ಲ ನಾವು ಆಯ್ಕೆ ಮಾಡಿರುವ ರಾಜಕಾರಣಿಗಳ ಕೆಸರೆರೆಚಾಟ
ಸಾರ್ವಜನಿಕರ ಪಾಡಂತೂ ಆಗಿಬಿಟ್ಟಿದೆ "ಇಲಿಗೆ ಸಂಕಟ - ಬೆಕ್ಕಿಗೆ ಚೆಲ್ಲಾಟ"
ಓ ದೇವರೆ, ಎಂದು ಮುಗಿಯುದೋ ತಿಳಿದಿಲ್ಲ ಇವರುಗಳ ಜಗ್ಗಾಟ||
ಆದಷ್ಟೂ ಬೇಗನೆ ಮುಗಿಸು!!!

ಭಾನುವಾರ, ಜುಲೈ 24, 2011

ಸೇರುವೆ!!!


ಮೋಡ ತೊರೆದು ಹನಿಯು ಭುವಿ ಸೇರಿದಂತೆ,
ಗೂಡ ತೊರೆದು ಹಕ್ಕಿಯು ಬಾನು ಸೇರಿದಂತೆ,
ನಾ ನಿನ್ನ ಸೇರುವೆ!!!

ಶುಕ್ರವಾರ, ಜುಲೈ 15, 2011

ಕವಿತೆ!!!


ನಿನ್ನ ನಗುವಿನಲಿ ನಾ ಸಂತಸದಿ ಬೆರೆತೆ,
ನಿನ್ನ ಚೆಲುವಿನಲಿ ನಾನಿಂದು ಕಲೆತೆ,
ನಿನ್ನ ಸನಿಹದಲಿ ನನ್ನೇ ನಾ ಮರೆತೆ,
ಏಕೆಂದರೆ ನೀನೆ ಅಲ್ಲವೆ ನನ್ನ ಬಾಳಿನ ಕವಿತೆ!!!

ಗುರುವಾರ, ಜುಲೈ 07, 2011

ಪ್ರತಿಬಿಂಬ!


ನೀನಿಲ್ಲದಿದ್ದರೂ...

ನಿನದೇ ನೆನಪು ನನಗೆ "ದಿನಪ್ರತಿ",
ಏಕೆಂದರೆ ನೀನೇ ಅಲ್ಲವೆ ಪ್ರೀತಿಯ "ಬಿಂಬ"||

ಆದರೆ
ಇಲ್ಲಿ "ದಿನ" ಕಳೆದಂತೆ ನನ್ನೊಳಗೆ ಬರೀ ನಿನ್ನದೆ ಪ್ರತಿಬಿಂಬ!!!

ಮಂಗಳವಾರ, ಜೂನ್ 28, 2011

ಕಾಮನಬಿಲ್ಲು


ನನ್ನ ಆಸೆಗಳೆಂಬ ಮಳೆಗೆ ನಿನ್ನ ನೋಟವೆಂಬ ಬಿಸಿಲು ಸೇರಿ,
ಮೂಡಿತು ಮನದಲಿ ಪ್ರೀತಿಯೆಂಬ ಕಾಮನಬಿಲ್ಲು||
ನನ್ನ ಭಾವನೆಗಳೆಂಬ ಕವಿತೆಗೆ ನಿನ್ನ ಮಾತುಗಳೆಂಬ ರಾಗ ಸೇರಿ,
ಹಾಡಿತು ನನ್ನ ಹೃದಯವು ಪ್ರೀತಿಯ ಸೊಲ್ಲು||

ಶುಕ್ರವಾರ, ಜೂನ್ 17, 2011

ತರಗೆಲೆ




ಪ್ರೀತಿಯ ತಂಗಾಳಿಯಲ್ಲಿ ಹಸಿರೆಲೆಯಂತೆ ತೂರಾಡಬೇಕಿದ್ದ ನಾನು,
ಇಂದು ಅದೇ ಪ್ರೀತಿಯು ಸೊರಗಿ ನೆಲಕ್ಕೆ ಉದುರುವಂತಾಯಿತು||
ತರಗೆಲೆಯಾದರೂ, ನಿನ್ನ ಪ್ರೇಮದ ಬಿರುಗಾಳಿಗೆ ತೇಲಬೇಕಿದ್ದ ನಾನು,
ಪ್ರೀತಿಯಿಲ್ಲದೆ, ವಿರಹದ ಬಿಸಿಯಲ್ಲಿ ನನ್ನ ಮನವು ಸುಡುವಂತಾಯಿತು||
ಸುಟ್ಟರೂ, ಬೂದಿಯಾಗಿ ನೀ ಉಸಿರಾಡೋ ಗಾಳಿಯಲ್ಲಿ ಸೇರಬೇಕಿದ್ದ ನಾನು,
ನೀನಿಲ್ಲದೆ, ನಿನ್ನ ಪ್ರೀತಿಯಿಲ್ಲದೆ ಮಣ್ಣಲಿ ಮಣ್ಣಾಗಿ ಹೋಗುವಂತಾಯಿತು||
ಇದು ಸರಿಯೇ???

ಬುಧವಾರ, ಜೂನ್ 01, 2011

ಬೆಳಕಾಯಿತು!!!


ಭೂಮಿಗೆ ಬೆಳಿಗ್ಗೆಯಾಗುವುದು ಬೆಳಗುವ ಆ ಸೂರ್ಯನಿಂದ,
ಆದರೆ ನನಗೆ ಬೆಳಕು ಹರಿವುದು ಅವಳ ಮಾತಿನ ಸವಿಯಿಂದ!
ಅವಳು ಆಡಿದ ಪದಗಳಿಂದ ಮೂಡಿಬರುತಿತ್ತು ಅದೇ ರಾಗ,
ಕಣ್ಣು ತೆರೆದೆ,ಅಮ್ಮ ಕೂಗಿದಳು... ಬೆಳಕಾಯಿತು ಎದ್ದೆಳೊ ಬೇಗ!!!

ಶನಿವಾರ, ಮೇ 21, 2011

ಚಾಚು - ಬಾಚು!!!


ಹಾಸಿಗೆ ಇದ್ದಷ್ಟು ಕಾಲು ಚಾಚು,
ಹಾಸಿಗೆ ಇದ್ದಷ್ಟು ಕಾಲು ಚಾಚು,
ಆದರೆ ಕೈಲಾದಷ್ಟು ದುಡ್ಡು ಬಾಚು :)

ಸೋಮವಾರ, ಮೇ 16, 2011

ಗುಂಡಗೆ!!!



ನಿನ್ನಿಂದ ದೂರವಾದಷ್ಟೂ, ನಿನಗೆ ಹತ್ತಿರ ನಾನಾಗುವೆ...
ನಿನ್ನಿಂದ ದೂರವಾದಷ್ಟೂ, ನಿನಗೆ ಹತ್ತಿರ ನಾನಾಗುವೆ.
ಏಕೆಂದರೆ... ಈ ಭೂಮಿ ಇರುವುದು ಗುಂಡಗೆ ಅಲ್ಲವೆ???

ಶುಕ್ರವಾರ, ಏಪ್ರಿಲ್ 22, 2011

ನೆನಪೆಂಬುದು...


ನೆನಪೆಂಬುದು ಸುರಿವ ಮಳೆಯಲ್ಲ,
ಅದು ಸುಡುವ ಬಿಸಿಲಂತೆ... ಹೆಚ್ಚಾದಷ್ಟೂ ಮನಸ್ಸು ಸುಡುವುದು||

ನೆನಪೆಂಬುದು ಬೀಸುವು ತಂಗಾಳಿಯಲ್ಲ,
ಅದು ಬಿರುಸು ಬಿರುಗಾಳಿ... ಬೀಸೆದಷ್ಟೂ ಮನಸ್ಸು ಕಳೆವುದು||

ನೆನಪೆಂಬುದು ಮೃದು ಹೂವಲ್ಲ,
ಅದು ತೀಕ್ಷ್ಣ ಮುಳ್ಳಿನಂತೆ... ಚುಚ್ಚಿದಷ್ಟೂ ಮನಸ್ಸು ಅಳುವುದು||

ಶನಿವಾರ, ಏಪ್ರಿಲ್ 16, 2011

ನಾ ಕೆಟ್ಟೆ

ಪ್ರೀತಿಯೆಂದರೆ ಏನೆಂದು ನೀನೆ ನನಗೆ ತೋರಿಸಿಕೊಟ್ಟೆ,
ನೀನಿಲ್ಲದೆ ಹೇಗೆ ಬಾಳಬೇಕೆಂಬುದ ನನಗೆ ಹೇಳಿ...ಬಿಟ್ಟೆ,
ಇಲ್ಲದೆ ಬಾಳಲಿ ಪ್ರೀತಿ, ತಿಳಿಯದೆ ಬಾಳುವ ರೀತಿ, ನಾ ಕೆಟ್ಟೆ!!!

ಶನಿವಾರ, ಮಾರ್ಚ್ 26, 2011

ಚಿತ್ತಾರ

ನನ್ನೆದೆಯ ಪುಟದಿ ಪ್ರೀತಿಯ ಚಿತ್ತಾರ ಮೂಡಿತು,
ಅದನ್ನು ಎಳೆ ಎಳೆಯಾಗಿ ಬಿಡಿಸಿದವಳು ನೀನೆ.
ಈಗ ನೀನಿಲ್ಲದೆ ಆ ಬಣ್ಣವು ಮಾಸಿತು,
ಮತ್ತೆ ಬಂದು ಚಿತ್ತಾರವ ಮೂಡಿಸಬಾರದೆ? ನನ್ನ ಮನದನ್ನೆ!

ಶನಿವಾರ, ಮಾರ್ಚ್ 19, 2011

ನೀ ನನ್ನ ಚಂದಿರ

ಚಂದಿರ ಬಂದು ಬಾನು ಬೆಳಗಿದಂತೆ,
ನಿನ್ನ ಆಗಮನದಿಂದ ಬೆಳಗಿತು ನನ್ನ ಬಾಳು.

ಒಮ್ಮೊಮ್ಮೆ ಚಂದಿರನು ಕೂಡ ಬರುವನು ಭೂಮಿಗೆ ಹತ್ತಿರ,
ಆದರೆ,ನೀ ಮಾತ್ರ ಉಳಿದೇ ಬಿಟ್ಟೆ ನನ್ನಿಂದ ದೂರ.

ಒಂದಂತು ಸತ್ಯ...
ಚಂದಿರನು ಸದಾ ಸುತ್ತುವಂತೆ ಭೂಮಿಯನು,
ನಿನ್ನ ನೆನಪುಗಳು ಸುತ್ತುತ್ತಲೆ ಇರುವುವು ನನ್ನನು.

ನಿನ್ನ ಸವಿನೆನಪುಗಳು ಹುಣ್ಣಿಮೆಯಂತೆ ಬೆಳಗಲು,
ನೀನಿಲ್ಲದೆ ನನ್ನ ಬಾಳು ಅಮಾವಾಸೆಯ ಕತ್ತಲು...

ಭಾನುವಾರ, ಮಾರ್ಚ್ 06, 2011

ನನ್ನ ಪ್ರೀತಿ

ಕೆಲವರೆಂದರು...
ಪ್ರೀತಿಯೆಂಬುದು ಆಗಸಕ್ಕಿಂತ ಎತ್ತರ.
ಇನ್ನೂ ಕೆಲವರೆಂದರು...
ಪ್ರೀತಿಯೆಂಬುದು ಸಾಗರಕ್ಕಿಂತ ಆಳ.
ಆದರೆ ನನಗೆ...
ಪ್ರೀತಿಯೆಂದರೆ ಮಗುವಿನ ನಗುವಿನಷ್ಟೇ ಸುಂದರ...
ಅದು, ಹಕ್ಕಿಗಳ ಚಿಲಿಪಿಲಯಷ್ಟೇ ಸುಮಧುರ||

ಸೋಮವಾರ, ಫೆಬ್ರವರಿ 14, 2011

ಪ್ರೀತಿ ಹಕ್ಕಿ-ಚುಕ್ಕಿ

ಯಾರು ನಿಜವಾದ ಪ್ರೇಮಿಗಳು???
ತಮ್ಮ ಪ್ರೀತಿಗಾಗಿ ಎಲ್ಲವನ್ನು-ಎಲ್ಲರನ್ನು ಬಿಟ್ಟು, ಜೀವನದ ಆಗಸದಿ ಹಾರಾಡುವ ಪ್ರೇಮಿ ಹಕ್ಕಿಗಳೇ?
ಅಥವಾ...
ತಮ್ಮವರಿಗಾಗಿ ತಮ್ಮ ಪ್ರೀತಿಯನ್ನು ಬಳಿ ಕೊಟ್ಟು, ಅದೇ ಆಗಸದಿ ಬೇರಾಗುವ ಪ್ರೀತಿ ಚುಕ್ಕಿಗಳೇ?

ಯಾವುದೇ ಇರಲಿ, ಏನೇ ಆಗಲಿ...
ಪ್ರೀತಿಯು ಎಲ್ಲರಲ್ಲೂ ಚಿರಂತನವಾಗಿರಲಿ||

ಎಲ್ಲರಿಗು ಪ್ರೇಮಿಗಳ ದಿನದ ಶುಭಾಶಯಗಳು..

ಭಾನುವಾರ, ಫೆಬ್ರವರಿ 06, 2011

ನೀ-ಕಾಣೆ

ಏಷ್ಟೇ ಹುಡುಕಿದರೂ ನನಗೆ ನೀ ಕಾಣೆ,
ಕಾಣಿಸಬಾರದೆ ಒಮ್ಮೆಯಾದರೂ ಓ ಜಾಣೆ||
ಕಾಣಿಸಿ ನುಡಿಸು ಬಾ ನನ್ನೆದೆಯ ವೀಣೆ,
ಒಮ್ಮೆ ನುಡಿಸಿದರೆ ಸಾಕು ನಾ ನಿನ್ನ ಬಿಡೆನು ನನ್ನಾಣೆ!

ಬುಧವಾರ, ಜನವರಿ 26, 2011

ಕ್ಯಾನ್ಸರ್ - ಮಾರಿ

ಮುಗ್ಧ ಜನರನು ಏತಕೆ ಕಾರಣವಿಲ್ಲದೆ ನೀ ಕಾಡುವೆ,
ನಿನಗೆ ಮಾಡಲು ಬೇರೇನೂ ಕೆಲಸ ಇಲ್ಲವೆ?
ಇದ್ದಿದ್ದೇ ಆದರೆ ಏಕೆ ಹೀಗೆಲ್ಲ ನೀ ಮಾಡುವೆ.
ನಿನ್ನಿಂದ ಕೆಲವರ ಜೀವನದಲ್ಲಿ ಬರಿ ಕಣ್ಣೆರನ್ನೇ ನಾ ಕಾಣುವೆ,
ಇಗೋ ನಿನ್ನಲ್ಲಿ ನನ್ನ ಎರಡೂ ಕೈಗಳನ್ನು ಸೇರಿಸಿ ಬೇಡುವೆ,
ದಯವಿಟ್ಟು ಯಾರನ್ನೂ ಸಾಯಿಸಬೇಡ ಕ್ಯಾನ್ಸರ್ ಎಂಬ ಮಾರಿಯೇ...



ಶುಕ್ರವಾರ, ಜನವರಿ 21, 2011

ಬಕರ

ಮೊದಲು ಈರುಳ್ಳಿ, ಮತ್ತೆ ಈಗ ಏರಿಕೆ ಆಯಿತು ಪೆಟ್ರೋಲಿನ ದರ,
ಕೆಲವರೆಂದರು... ಇದು ಕಮಲದ ಕೈವಾಡ, ಇನ್ನು ಕೆಲವರ ಬಾಯಿ ತೆರಿಸಿತು ಕರ,
ದಣಿವಾಯಿತೇ ಹೊರತು ಪ್ರಯೋಜನಕ್ಕೆ ಬಾರಲಿಲ್ಲ ಜನರೆತ್ತಿದ ಜೋರು ಸ್ವರ,
ಬಡವರಿಗೆ ಆದರೆ ಇದು ಶಾಪ, ಮಧ್ಯವರ್ತಿಗಳಿಗೆ ದೇವರು ಕೊಟ್ಟ ವರ,
ಅದೇಕೋ ಹಿಡಿದಂತಿದೆ ನಮ್ಮೆಲ್ಲ "ನೆಚ್ಚಿನ" ಜನನಾಯಕರಿಗೆ ದೊಡ್ಡ ಗರ,
ಏನೇ ಆಗಲಿ ನಾವೆಲ್ಲ ಇವರೆಲ್ಲರ ಕೈಗಳಲ್ಲಿ "ಬಲಿಕಾ ಬಕರ" !!!
ಹರ ಹರ, ನೀನೆ ಕಾಪಾಡಬೇಕು ಶಂಭೋಶಂಕರ :)

ಶನಿವಾರ, ಜನವರಿ 15, 2011

ಎಳ್ಳು-ಬೆಲ್ಲ

ಕಹಿಯನ್ನು ಮರೆಯುತ ಒಳಿತನ್ನು ನೆನೆಯುವ,
ಒಳಿತನ್ನು ನೆನೆಯುತ ಸಂಕ್ರಾಂತಿ ಆಚರಿಸುವ,
ಸಂಕ್ರಾಂತಿಯ ಆಚರಿಸುತ ಎಳ್ಳು-ಬೆಲ್ಲವ ತಿನ್ನುವ,
ಎಳ್ಳು-ಬೆಲ್ಲ ತಿನ್ನುತ ಜೀವನದ ಕಹಿಯನ್ನು ಮರೆಯುವ!!!